ಮಾಯಾವತಿ ತಾಯಿ ನಿಧನ, ಬಿಎಸ್ಪಿ ನಾಯಕಿಯನ್ನು ಭೇಟಿಯಾಗಿ ಸಾಂತ್ವನ ಹೇಳಿದ ಪ್ರಿಯಾಂಕಾ ಗಾಂಧಿ

ಹೊಸದಿಲ್ಲಿ: ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಅವರ ತಾಯಿ ದಿಲ್ಲಿಯಲ್ಲಿ ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದು, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇಂದು ಮಾಯಾವತಿ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.
92 ರ ಹರೆಯದ ರಾಮರತಿ ಅವರು ಚಿಕಿತ್ಸೆ ಪಡೆಯುತ್ತಿದ್ದ ರಾಷ್ಟ್ರ ರಾಜಧಾನಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಬಿಡುಗಡೆ ಮಾಡಿರುವ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ಮಾಯಾವತಿ ಅವರು ತಮ್ಮ ತಾಯಿಯ ಸಾವಿನ ಬಗ್ಗೆ ಮಾಹಿತಿ ಪಡೆದ ಕೂಡಲೇ ದಿಲ್ಲಿಗೆ ತೆರಳಿದರು. ರವಿವಾರ ದಿಲ್ಲಿಯಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.
ಸುಮಾರು ಒಂದು ವರ್ಷದ ಹಿಂದೆ ಮಾಯಾವತಿಯವರ ತಂದೆ ಪ್ರಭುದಯಾಳ್ ಅವರು 95 ನೇ ವಯಸ್ಸಿನಲ್ಲಿ ನಿಧನರಾದರು ಎಂದು ಪ್ರಕಟನೆ ತಿಳಿಸಿದೆ.
Next Story





