ಮಂಗಳೂರು: ಭಟ್ಕಳಿ ಜಮಾತುಲ್ ಮುಸ್ಲಿಮೀನ್ ನಿಂದ ವೃತ್ತಿಪರ ತರಬೇತಿ ಕಾರ್ಯಾಗಾರ

ಮಂಗಳೂರು, ನ.14: ಭಟ್ಕಳಿ ಜಮಾತುಲ್ ಮುಸ್ಲಿಮೀನ್ (ಬಿಜೆಎಂ) ಮಂಗಳೂರುಇದರ ವತಿಯಿಂದ ವೃತ್ತಿಪರ ತರಬೇತಿ ಕಾರ್ಯಾಗಾರವು ರವಿವಾರ ನಗರದ ಜ್ಯೋತಿ ಬಳಿಯಿರುವ ಬಿಜೆಎಂ ಹಾಸ್ಟೆಲ್ ಸಭಾಂಗಣದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕ್ಯಾರಿಯರ್ ಇನ್ಫೋರ್ಮೇಶನ್ ಆ್ಯಂಡ್ ಗೈಡೆನ್ಸ್ ಮೂವ್‌ಮೆಂಟ್ ಫಾರ್ ಆಲ್ (ಸಿಗ್ಮಾ) ಸಂಸ್ಥೆಯ ಸಿಇಒ ಅಮೀನ್-ಇ-ಮುದಸ್ಸಿರ್ 'ನವಯುಗದ ವೃತ್ತಿಪರತೆ-ಯಶಸ್ಸಿಗೆ ಹಾದಿ' ಕುರಿತು ಮಾತನಾಡಿ, ನಾವು ಕಲಿಯುವ ಕಾಲದಲ್ಲಿ ಅಧ್ಯಯನ ಮಾಡಲು, ಜ್ಞಾನ ಪಡೆಯಲು ಪಠ್ಯಪುಸ್ತಕ ಹೊರತುಪಡಿಸಿ ಬೇರೇನೂ ಇರಲಿಲ್ಲ. ಎಸೆಸೆಲ್ಸಿ, ಪಿಯುಸಿ, ಪದವಿ ಪಡೆದು ಉದ್ಯೋಗ ಪಡೆಯುವುದು ಮಾತ್ರ ಗುರಿಯಾಗಿತ್ತು. ಆದರೆ ಈಗ ಹಾಗಲ್ಲ. ಸಾಮಾಜಿಕ ಜಾಲತಾಣಗಳ ಮೂಲಕವೂ ಜ್ಞಾನ ವೃದ್ಧಿಸಬಹುದಾಗಿದೆ. ಯಾವುದೇ ವಿಷಯಕ್ಕೆ ಸಂಬಂಧಿಸಿ ಮಾಹಿತಿಗಳನ್ನು ಗೂಗಲ್ ಮೂಲಕ ಪಡೆಯಬಹುದಾಗಿದೆ. ಆದರೆ ಅದೇ ನಮ್ಮ ಬದುಕಿನ ಮುಖ್ಯ ಗುರಿಯಾಗಬಾರದು. ಅಧ್ಯಯನದ ಮೂಲಕ ಬದಲಾವಣೆ ಬಯಸುವ ಜಗತ್ತಿಗೆ ಹೊಂದಿಕೊಳ್ಳಬೇಕಿದೆ. ವೃತ್ತಿಪರ ಶಿಕ್ಷಣಕ್ಕೆ ಸಂಬಂಧಿಸಿ ಮಾಹಿತಿ ಪಡೆದು ಬದುಕು ಕಟ್ಟಿಕೊಳ್ಳಬೇಕಿದೆ. ಈಗ ಎಲ್ಲಾ ರಂಗದಲ್ಲೂ ಸಾಕಷ್ಟು ಅವಕಾಶಗಳಿವೆ. ಹಾಗಾಗಿ ಈ ಕಾಲದ ವಿದ್ಯಾರ್ಥಿಗಳು ಅದೃಷ್ಟವಂತರು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಭಟ್ಕಳ ಅಂಜುಮಾನ್ ಪಿಯು ಕಾಲೇಜಿನ ಪ್ರಾಂಶುಪಾಲ ಯೂಸುಫ್ ಕೋಲಾ, ಜಗತ್ತಿನ ಬದಲಾವಣೆಗೆ ತಕ್ಕಂತೆ ನಾವೂ ಬದಲಾಗಬೇಕು. ನಮ್ಮ ವಿದ್ಯೆ, ಪ್ರತಿಭೆಯನ್ನು ಮಾನವೀಯ ಮೌಲ್ಯಗಳಿಗೂ ಧಾರೆ ಎರೆಯಬೇಕು. ಇಸ್ಲಾಮೀ ಚೌಕಟ್ಟು ಮೀರದೆ ಯಶಸ್ಸು ಸಾಧಿಸಲು ಮುಂದಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಭಟ್ಕಳಿ ಜಮಾತುಲ್ ಮುಸ್ಲಿಮೀನ್ (ಬಿಜೆಎಂ) ಮಂಗಳೂರು ಇದರ ಅಧ್ಯಕ್ಷ ಎಸ್.ಎಂ.ಅರ್ಷದ್ ನಮ್ಮ ಸಂಘಟನೆಯು ಬೇರೆ ಬೇರೆ ಉಪ ಸಮಿತಿಗಳ ಮೂಲಕ ಸಮುದಾಯದ ಸೇವೆಗೈಯ್ಯುತ್ತಿದೆ. ಕೋವಿಡ್ ಕಾಲಘಟ್ಟದಲ್ಲಂತೂ ಅನೇಕ ಸಮಾಜ ಸೇವೆಗಳನ್ನು ಮಾಡಲಾಗಿದೆ. ಇದೀಗ ವೃತ್ತಿಗೆ ಸಂಬಂಧಿಸಿ ಹಮ್ಮಿಕೊಳ್ಳಲಾದ ಈ ಕಾರ್ಯಾಗಾರದ ಮೂಲಕ ಲಭಿಸಿದ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕಿದೆ ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಚಾರ್ಟಡ್ ಅಕೌಂಟೆಂಟ್ ಅಬ್ದುರ್ರಹ್ಮಾನ್ ಮುಸ್ಬಾ, ಝಾಹಿದ್ ಹುಸೈನ್ ಖರೂರಿ, ಹಿಬ್ಬಾನ್ ಶಾಬಂದ್ರಿ, ಬಿಜೆಎಂ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ದಾಂಬ್ಡ ಮತ್ತಿತರರು ಉಪಸ್ಥಿತರಿದ್ದರು.
ಇಕ್ಬಾಲ್ ಸಿದ್ದೀಕ್ ಕಿರಾಅತ್ ಪಠಿಸಿದರು. ಬಿಜೆಎಂ ಸಂಚಾಲಕ ಅಫ್ತಾಬ್ ಕೋಲ ಕಾರ್ಯಕ್ರಮ ನಿರೂಪಿಸಿದರು.






.gif)



.gif)

