ಕಾರ್ಕಳ: ಹಿಂದೂ ಸಂಗಮ ಕಾರ್ಯಾಲಯ ಉದ್ಘಾಟನೆ

ಕಾರ್ಕಳ, ನ.14: ಗೋವಿನ ಪ್ರಕರಣ, ಲವ್ ಜಿಹಾದ್, ಮತಾಂತರ ನಡೆಯುತ್ತಿರುವ ವಿಚಾರ ಅಲ್ಲಲ್ಲಿ ಕೇಳಿಬರುತ್ತಿದೆ. ಇಂತಹ ಕಾರ್ಯದಲ್ಲಿ ಮಗ್ನರಾಗಿರುವ ದ್ರೋಹಿಗಳು ರಾಜ್ಯ ಹಾಗೂ ಕೇಂದ್ರದಲ್ಲಿ ಹಿಂದೂಪರ ಸರಕಾರವಿದೆ ಎಂಬುದನ್ನು ಮನಗಾಣಬೇಕು ಎಂದು ಇಂಧನ ಸಚಿವ ಸುನೀಲ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಅವರು ನ. 14ರಂದು ಕಾರ್ಕಳ ರಥಬೀದಿಯಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗ ದಳದ ವತಿಯಿಂದ ನಿರ್ಮಾಣವಾದ ಹಿಂದೂ ಸಂಗಮ ಕಾರ್ಯಾಲಯ ಉದ್ಘಾಟಿಸಿ ಮಾತನಾಡುತ್ತಿದ್ದರು.
ಗೋ ಹತ್ಯೆ ನಿಷೇಧ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಇದರಿಂದ ಗೋವಿನ ಕುರಿತಾಗಿರುವ ಆತಂಕ ದೂರಗಲಿದೆ. ಲವ್ ಜಿಹಾದ್, ಮತಾಂತರ ತಡೆಗೆ ರಾಜ್ಯ ಸರಕಾರ ಹೊಸ ಕಾನೂನು ತರುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದ್ದು, ಮುಂದಿನ ಅಧಿವೇಶನದಲ್ಲೇ ಇದಕ್ಕೊಂದು ಸ್ಪಷ್ಟ ರೂಪ ನೀಡುವ ಕುರಿತಂತೆ ಉನ್ನತ ಮಟ್ಟದಲ್ಲಿ ತೀರ್ಮಾನಿಸಲಾಗುವುದು ಎಂದು ಸುನಿಲ್ ಕುಮಾರ್ ತಿಳಿಸಿದರು.
ಸಾಮಾಜಿಕ, ಧಾರ್ಮಿಕ ಮುಂದಾಳು ರವೀಂದ್ರ ಶೆಟ್ಟಿ ಬಜಗೋಳಿ ಮಾತನಾಡಿದರು.
ಗೋ-ಹತ್ಯೆ, ಲವ್ ಜಿಹಾದ್, ಮತಾಂತರ ಇಂದಿನ ಕಾಲದಲ್ಲೂ ನಮಗೆ ಸವಾಲಾಗುತ್ತಿದ್ದು ಇದನ್ನು ಹತ್ತಿಕ್ಕುವ ಕಾರ್ಯವಾಗಬೇಕಿದೆ ಎಂದು ಬಜರಂಗದಳ ರಾಜ್ಯ ಸಂಚಾಲಕ ಸುನೀಲ್ ಕೆ.ಆರ್. ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಪುರಸಭಾಧ್ಯಕ್ಷೆ ಸುಮಾಕೇಶವ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸುರೇಂದ್ರ ಶೆಣೈ ಉಪಸ್ಥಿತರಿದ್ದರು. ಚೇತನ್ ಪೇರಲ್ಕೆ ಸ್ವಾಗತಿಸಿ, ಸುರಕ್ಷಾ ಕಾರ್ಯಕ್ರಮ ನಿರೂಪಿಸಿದರು. ಅಶೋಕ್ ಕುಮಾರ್ ಜೈನ್ ವಂದಿಸಿದರು.







