ಉಡುಪಿ: ಸತತ ಮೂರನೇ ದಿನ ಆರು ಮಂದಿಯಲ್ಲಿ ಕೊರೋನ ಸೋಂಕು ಪತ್ತೆ
![ಉಡುಪಿ: ಸತತ ಮೂರನೇ ದಿನ ಆರು ಮಂದಿಯಲ್ಲಿ ಕೊರೋನ ಸೋಂಕು ಪತ್ತೆ ಉಡುಪಿ: ಸತತ ಮೂರನೇ ದಿನ ಆರು ಮಂದಿಯಲ್ಲಿ ಕೊರೋನ ಸೋಂಕು ಪತ್ತೆ](https://www.varthabharati.in/sites/default/files/images/articles/2021/11/14/313768-1636898139.jpg)
ಉಡುಪಿ, ನ.14: ಜಿಲ್ಲೆಯಲ್ಲಿ ಸತತ ಮೂರನೇ ದಿನವಾದ ರವಿವಾರವೂ ಆರು ಮಂದಿಯಲ್ಲಿ ಕೊರೋನ ಪಾಸಿಟಿವ್ ಕಂಡು ಬಂದಿದೆ. ದಿನದಲ್ಲಿ ಐದು ಮಂದಿ ಗುಣಮುಖರಾದರೆ, 41 ಮಂದಿ ಇನ್ನೂ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ದಿನದಲ್ಲಿ ನಾಲ್ವರು ಪುರುಷರು ಮತ್ತು ಇಬ್ಬರು ಮಹಿಳೆಯಲ್ಲಿ ಸೋಂಕು ಕಂಡುಬಂದಿದೆ. ಇವರಲ್ಲಿ ಐವರು ಉಡುಪಿ ತಾಲೂಕಿನವರಾದರೆ, ಒಬ್ಬರು ಕುಂದಾಪುರದವರು. ಸೋಂಕು ಪತ್ತೆಯಾದವರಲ್ಲಿ ಮೂವರಿಗೆ ಆಸ್ಪತ್ರೆಯಲ್ಲೂ ಉಳಿದ ಮೂವರಿಗೆ ಮನೆಯಲ್ಲೂ ಚಿಕಿತ್ಸೆ ನೀಡಲಾಗುತ್ತಿದೆ. ಸತತ 26ನೇ ದಿನವಾದ ಇಂದು ಸಹ ಜಿಲ್ಲೆಯಲ್ಲಿ ಕೊರೋನದಿಂದ ಯಾರೂ ಮೃತಪಟ್ಟಿಲ್ಲ.
ಶನಿವಾರ ಸೋಂಕಿನಿಂದ ಐವರು ಗುಣಮುಖರಾಗಿದ್ದು, ಈವರೆಗೆ ಕೊರೋನ ದಿಂದ ಚೇತರಿಸಿಕೊಂಡವರ ಸಂಖ್ಯೆ 76,268ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 1599 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 76,785ಕ್ಕೇರಿದೆ.
587 ಮಂದಿಗೆ ಲಸಿಕೆ: ಇಂದು ಜಿಲ್ಲೆಯಲ್ಲಿ ಒಟ್ಟು 587 ಮಂದಿ ಕೋವಿಡ್ ಲಸಿಕೆ ಸ್ವೀಕರಿಸಿದ್ದು, ಇವರಲ್ಲಿ 21 ಮಂದಿ ಮೊದಲ ಡೋಸ್ ಹಾಗೂ 566 ಮಂದಿ ಎರಡನೇ ಡೋಸ್ ಸ್ವೀಕರಿಸಿದ್ದಾರೆ ಎಂದು ಡಿಎಚ್ಓ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.
ಲಸಿಕೆ ಪಡೆದವರಲ್ಲಿ 18 ವರ್ಷದಿಂದ 44 ವರ್ಷದೊಳಗಿನ 16 ಮಂದಿ ಮೊದಲ ಡೋಸ್ ಹಾಗೂ 392 ಮಂದಿ ಎರಡನೇ ಡೋಸ್ ಲಸಿಕೆಯನ್ನು ಸ್ವೀಕರಿಸಿದರೆ, 45 ವರ್ಷ ಮೇಲಿನ ಐವರು ಮೊದಲ ಡೋಸ್ ಹಾಗೂ 173 ಮಂದಿ ಎರಡನೇ ಡೋಸ್ ಪಡೆದಿದ್ದಾರೆ.