ರಾಷ್ಟ್ರಮಟ್ಟದ ಯಕ್ಷಗಾನ ತರಬೇತಿ ಕಮ್ಮಟಕ್ಕೆ ಚಾಲನೆ

ಉಡುಪಿ, ನ.14: ಉಡುಪಿ ಯಕ್ಷಗಾನ ಕೇಂದ್ರದ ಆಶ್ರಯದಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಕೇಂದ್ರದಲ್ಲಿ ಹಮ್ಮಿಕೊಳ್ಳಲಾದ ಒಂದು ತಿಂಗಳ ರಾಷ್ಟ್ರಮಟ್ಟದ ಯಕ್ಷಗಾನ ತರಬೇತಿ ಕಮ್ಮಟಕ್ಕೆ ರವಿವಾರ ಚಾಲನೆ ನೀಡಲಾಯಿತು.
ಕಮ್ಮಟವನ್ನು ಉದ್ಘಾಟಿಸಿದ ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಮಾತನಾಡಿ, ಯಕ್ಷಗಾನವು ಸಾಹಿತ್ಯ, ಅಭಿನಯ, ಸಂಗೀತ, ವೇಷಭೂಷಣ, ಮಾತುಗಾರಿಕೆ, ನೃತ್ಯ ಸೇರಿದಂತೆ ಎಲ್ಲ ಪ್ರಕಾರಗಳು ಇರುವ ಸಮ್ಮಶ್ರ ಕಲೆಯಾಗಿದೆ. ಯಕ್ಷಗಾನಕ್ಕೆ ದೊರೆತ ರಾಷ್ಟ್ರ ಮನ್ನಣೆ ಕರ್ನಾಟಕದ ಬೇರೆ ಯಾವ ಕಲೆಗೂ ದೊರೆತಿಲ್ಲ. ಈ ಕಲೆಗೆ ಸರಕಾರ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಕೇಂದ್ರದ ಸಲಹಾ ಸಮಿತಿಯ ಅಧ್ಯಕ್ಷ ಡಾ.ಪಿ.ಎಲ್.ಎನ್. ರಾವ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಲ್ಲೂರು ಶಿವರಾಮ ಶೆಟ್ಟಿ, ಭುವನ ಪ್ರಸಾದ್ ಹೆಗ್ಡೆ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ವೈದ್ಯ ಡಾ.ಸತೀಶ್ ಕಾಮತ್, ಗುರು ಬನ್ನಂಜೆ ಸಂಜೀವ ಸುವರ್ಣ ಉಪಸ್ಥಿತರಿದ್ದರು.
ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿ ಅಭಿನವ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಒಂದು ತಿಂಗಳ ಕಾಲ ನಡೆಯುವ ಈ ತರಬೇತಿ ಕಮ್ಮಟದಲ್ಲಿ ಉತ್ತರ ಪ್ರದೇಶ, ರಾಜಸ್ತಾನ, ದೆಹಲಿ, ಪಂಜಾಬ್, ಅಸ್ಸಾಂ, ಮಹಾರಾಷ್ಟ್ರ, ಕರ್ನಾಟಕದ ಒಟ್ಟು 14 ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.







