ಆರ್ಯನ್ ಖಾನ್ ಪ್ರಕರಣ: ಓರ್ವ ಆರೋಪಿಯಿಂದ ಕಾನೂನುಬಾಹಿರವಾಗಿ ಮಾದಕದ್ರವ್ಯ ವಶ; ಮುಂಬೈ ನ್ಯಾಯಾಲಯ

ಮುಂಬೈ, ನ.14: ಕಳೆದ ತಿಂಗಳು ವಿಹಾರ ನೌಕೆಯ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಅನಧಿಕೃತ ವ್ಯಕ್ತಿ ಓರ್ವ ಆರೋಪಿಯ ಬಳಿಯಿಂದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದು ಕಾನೂನುಬಾಹಿರವಾಗಿದೆ ಎಂದು ಇಲ್ಲಿಯ ವಿಶೇಷ ಎನ್ಡಿಪಿಎಸ್ ನ್ಯಾಯಾಲಯವು ಹೇಳಿದೆ. ಬಾಲಿವುಡ್ ನಟ ಶಾರುಕ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಕೂಡ ಪ್ರಕರಣದ ಆರೋಪಿಗಳಲ್ಲಿ ಓರ್ವರಾಗಿದ್ದಾರೆ.
ಅಧಿಕೃತ ಅಧಿಕಾರಿಯ ಬದಲು ಪಂಚನಾಮೆಯ ಸಾಕ್ಷಿಯೋರ್ವರು ನೌಕೆಯಲ್ಲಿನ ಆರೋಪಿ ನೂಪುರ್ ಸತಿಜಾರ ಕೋಣೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದರು ಎಂದು ನ್ಯಾ.ವಿ.ವಿ.ಪಾಟೀಲ್ ಅವರು ತನ್ನ ಆದೇಶದಲ್ಲಿ ಹೇಳಿದ್ದಾರೆ.
ಸತಿಜಾ ಮತ್ತು ಸಹ ಆರೋಪಿ ಗೋಮತಿ ಚೋಪ್ರಾ ಅವರಿಗೆ ಅ.30ರಂದೇ ಜಾಮೀನು ಮಂಜೂರಾಗಿತ್ತಾದರೂ ನ್ಯಾಯಾಲಯದ ಆದೇಶವನ್ನು ಶನಿವಾರವಷ್ಟೇ ಲಭ್ಯವಾಗಿಸಲಾಗಿತ್ತು.
ಮಾದಕ ದ್ರವ್ಯ ನಿಯಂತ್ರಣ ಘಟಕ (ಎನ್ಸಿಬಿ)ವು ಸತಿಜಾರಿಂದ 1.59 ಗ್ರಾಂ ತೂಕದ ನಾಲ್ಕು ಎಕ್ಸ್ಟಾಸಿ ಮಾತ್ರೆಗಳು ಹಾಗೂ ಚೋಪ್ರಾ ಬಳಿಯಿಂದ ನಾಲ್ಕು ಎಕ್ಸ್ಟಾಸಿ ಮಾತ್ರೆಗಳು,ಮೂರು ಗ್ರಾಂ ಕೊಕೇನ್ ಮತ್ತು 93,000 ರೂ.ನಗದು ಹಣವನ್ನು ವಶಪಡಿಸಿಕೊಂಡಿತ್ತು. ಅ.2ರಂದು ಮುಂಬೈ ಕರಾವಳಿಯಾಚೆ ನೌಕೆಯ ಮೇಲೆ ದಾಳಿ ನಡೆಸಿದ್ದ ಎನ್ಸಿಬಿ ಆರ್ಯನ್ ಸೇರಿದಂತೆ ಹಲವರನ್ನು ಬಂಧಿಸಿತ್ತು. ಮುಂಬೈ ಉಚ್ಚ ನ್ಯಾಯಾಲಯವು ಅ.28ರಂದು ಆರ್ಯನ್ ಗೆ ಜಾಮೀನು ಮಂಜೂರು ಮಾಡಿತ್ತು.
ಸತಿಜಾರ ಜಾಮೀನು ಅರ್ಜಿಯ ವಿಚಾರಣೆ ಸಂದರ್ಭ ಅವರ ಪರ ವಕೀಲರಾದ ಅಯಾಝ್ ಖಾನ್ ಮತ್ತು ಸರ್ತಾಜ್ ಶೇಖ್ ಅವರು,ಪ್ರಕರಣದ ಪಂಚನಾಮೆಯ ಮಹಿಳಾ ಸಾಕ್ಷಿಯೋರ್ವರು ಗುಪ್ತಚರ ಅಧಿಕಾರಿಯೋರ್ವರ ಸೂಚನೆಯ ಮೇರೆಗೆ ತಮ್ಮ ಕಕ್ಷಿದಾರರ ಕೋಣೆಯನ್ನು ಶೋಧಿಸಿದ್ದರು. ಸರಕಾರದ ಅಧಿಸೂಚನೆಯಂತೆ ಎನ್ಸಿಬಿಯ ಇನ್ಸ್ಪೆಕ್ಟರ್ ದರ್ಜೆಯ ಅಥವಾ ಮೇಲಿನ ಅಧಿಕಾರಿಗಳು ಮಾತ್ರ ಶೋಧ ಕಾರ್ಯಾಚರಣೆಯನ್ನು ನಡೆಸುವ ಮತ್ತು ವಶಪಡಿಸಿಕೊಳ್ಳುವ ಅಧಿಕಾರವನ್ನು ಹೊಂದಿದ್ದಾರೆ ಎಂದು ವಾದಿಸಿದ್ದರು.
ವಿಶೇಷ ಸರಕಾರಿ ಅಭಿಯೋಜಕರಾದ ಎ.ಎಂ.ಚಿಮಲ್ಕರ್ ಮತ್ತು ಅದ್ವೆತ್ ಸೇಟ್ನಾ ಅವರು,ಎನ್ಸಿಬಿಯು ವಿಶ್ವಾಸಾರ್ಹ ಮಾಹಿತಿಯ ಮೇರೆಗೆ ‘ಸಣ್ಣ,ಮಧ್ಯಂತರ ಮತ್ತು ವಾಣಿಜ್ಯಿಕ ಪ್ರಮಾಣಗಳಲ್ಲಿ ’ಮಾದಕ ದ್ರವ್ಯಗಳನ್ನು ಹೊಂದಿದ್ದ ಜನರನ್ನು ಬಂಧಿಸಿದೆ ಮತ್ತು ಆರೋಪಿಗಳು ಮಾದಕ ದ್ರವ್ಯ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದರು ಎಂದು ವಾದಿಸಿದ್ದರು.
ಆದಾಗ್ಯೂ ನ್ಯಾಯಾಲಯವು ಪ್ರಾಸಿಕ್ಯೂಷನ್ ಪುರಾವೆಯಾಗಿ ಉಲ್ಲೇಖಿಸಿರುವ ಸತಿಜಾ ಮತ್ತು ಚೋಪ್ರಾ ನಡುವಿನ ವಾಟ್ಸ್ಆ್ಯಪ್ ಚಾಟ್ಗಳು ಮಾದಕ ದ್ರವ್ಯಗಳ ಸೇವನೆಗೆ ಸಂಬಂಧಿಸಿವೆಯೇ ಹೊರತು ಅದರ ಮಾರಾಟ ಅಥವಾ ಖರೀದಿಗೆ ಅಲ್ಲ ಎಂದು ತನ್ನ ಆದೇಶದಲ್ಲಿ ಹೇಳಿದೆ.
ದಾಖಲೆಗಳನ್ನು ಪರಿಶೀಲಿಸಿದರೆ ಮೇಲ್ನೋಟಕ್ಕೆ ಸಂಚು ನಡೆದಿದೆಯೆಂದು ಹೇಳಲು ಸಾಧ್ಯವಿಲ್ಲ ಎಂದೂ ನ್ಯಾಯಾಲಯವು ಹೇಳಿದೆ. ಈವರೆಗೆ ಪ್ರಕರಣದಲ್ಲಿಯ 20 ಆರೋಪಿಗಳ ಪೈಕಿ 15 ಜನರು ಜಾಮೀನು ಪಡೆದಿದ್ದಾರೆ.