ಹೂಡೆಯಲ್ಲಿ ಉಚಿತ ಆರೋಗ್ಯ ತಪಾಸಣಾ -ಮಾಹಿತಿ ಶಿಬಿರ

ಉಡುಪಿ, ನ.14: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಎನ್.ಸಿ.ಡಿ. ವಿಭಾಗ, ಜಿಲ್ಲಾ ಸರ್ವೇಕ್ಷಣ ಘಟಕ, ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತು ಸಮಾಜ ಸೇವಾ ವಿಭಾಗ, ಜಮಾಅತೆ ಇಸ್ಲಾಮೀ ಹಿಂದ್ ತೋನ್ಸೆ ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನಾಚರಣೆ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಮತ್ತು ಮಾಹಿತಿ ಶಿಬಿರವನ್ನು ಹೂಡೆಯ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಲಾಗಿತ್ತು.
ಶಿಬಿರವನ್ನು ಜಿಲ್ಲಾ ವೈದ್ಯಕೀಯ ತಜ್ಞ ಡಾ.ನಾಗರಾಜ್ ಉದ್ಘಾಟಿಸಿದರು. ಜಮಾಅತೆ ಇಸ್ಲಾಮಿ ಹಿಂದ್ ಇದರ ಕಾರ್ಯಕರ್ತರು ಮತ್ತು ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಇದ್ರಿಸ್ ಹೂಡೆ ಮಾತನಾಡಿದರು. ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಕುರಿತು ಮಾಹಿತಿ ನೀಡಲಾಯಿತು. ಎಂ.ಐ.ಓ. ಆಸ್ಪತ್ರೆಯ ಡಾ.ವೆಂಕಟರಮಣ ಕಿಣಿ ಕ್ಯಾನ್ಸರ್ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯ ಆಪ್ತ ಸಮಾಲೋಚಕ ಮನು, ಕೆಮ್ಮಣ್ಣು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಬಿಶು ನಾಯಕ್, ಡಾ.ಪ್ರೀಮಾ, ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಮಹಿಳಾ ಘಟಕ ಅಧ್ಯಕ್ಷೆ ಜಮೀಲಾ ಸದೀದಾ, ಎಚ್.ಆರ್.ಎಸ್ ಹೂಡೆ ಸಂಚಾಲಕ ಝೈನುಲ್ಲಾ, ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಕಾರ್ಯದರ್ಶಿ ಹಸನ್ ಕೋಡಿಬೆಂಗ್ರೆ, ಹೂಡೆ ಎಸ್‌ಐಓ ಅಧ್ಯಕ್ಷ ವಸೀಮ್, ಹೂಡೆ ಸಾಲಿಡಾರಿಟಿಯ ಜಬೀರ್ ಕಿದೆವರ್ ಉಪಸ್ಥಿತರಿದ್ದರು.
ಶಿಬಿರದಲ್ಲಿ ಭಾಗವಹಿಸಿದ ನೂರಾರು ನಾಗರಿಕರಿಗೆ ಮಧುಮೇಹ, ರಕ್ತ ದೊತ್ತಡ, ಕ್ಷಯರೋಗ, ದಂತ ತಪಾಸಣೆ, ಕಣ್ಣಿನ ಪರೀಕ್ಷೆ, ತಂಬಾಕು, ಮದ್ಯಪಾನ ಬಗ್ಗೆ ಜಾಗೃತಿ ಮತ್ತು ಚಿಕಿತ್ಸೆ ನೀಡಲಾಯಿತು. ಎನ್‌ಸಿಡಿ ಜಿಲ್ಲಾ ಸಮಾಲೋಚಕಿ ಡಾ.ಅಂಜಲಿರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.







