ಮಲಯಾಳಂ ಸಾಹಿತಿ ಮುಕುಂದನ್ ಕೃತಿಗೆ 2021ರ ಜೆಸಿಬಿ ಬಹುಮಾನ

ಹೊಸದಿಲ್ಲಿ, ನ.14: ಮಲಯಾಳಂ ಸಾಹಿತಿ ಎಂ.ಮುಕುಂದನ್ ಅವರ ‘ದಿಲ್ಲಿ:ಎ ಸಾಲಿಲಾಕಿ (ದಿಲ್ಲಿ:ಒಂದು ಸ್ವಗತ)’ ಕೃತಿಯು 2021ರ ಜೆಸಿಬಿ ಬಹುಮಾನವನ್ನು ಗೆದ್ದುಕೊಂಡಿದೆ. 25 ಲ.ರೂ.ಗಳ ಈ ಬಹುಮಾನವು ಬರವಣಿಗೆಗಾಗಿ ಅತ್ಯಂತ ಹೆಚ್ಚು ಮೌಲ್ಯದ ಭಾರತೀಯ ಪ್ರಶಸ್ತಿಯಾಗಿದೆ. ಮೂಲತಃ ಮಲಯಾಳಂ ಭಾಷೆಯಲ್ಲಿ ರಚನೆಯಾಗಿದ್ದ ಕೃತಿಯನ್ನು ಫಾತಿಮಾ ಇ.ವಿ. ಮತ್ತು ನಂದಕುಮಾರ್ ಕೆ. ಅವರು ಇಂಗ್ಲೀಷ್ ಗೆ ಅನುವಾದಿಸಿದ್ದಾರೆ.
ಇದು ಬೆನ್ಯಾಮಿನ್ ಅವರ ‘ಜಾಸ್ಮಿನ್ ಡೇಸ್’(2018) ಮತ್ತು ಎಸ್.ಹರೀಶ್ ಅವರ ‘ಮುಷ್ಟಾಕ್(ಮೀಸೆ)’ (2020) ನಂತರ ಈ ಪ್ರಶಸ್ತಿಗೆ ಪಾತ್ರವಾದ ಮೂರನೇ ಅನುವಾದವಾಗಿದೆ.
‘ಇದು ನಾನು ಜೀವಮಾನವಿಡೀ ಹರ್ಷ ಪಡುವ ಘಳಿಗೆಯಾಗಿದೆ. ಭಾರತದಲ್ಲಿ ಸಣ್ಣ ಮತ್ತು ದೊಡ್ಡ ಹಲವಾರು ಪ್ರಶಸ್ತಿಗಳಿವೆ, ಆದರೆ ಜೆಸಿಬಿ ಪ್ರಶಸ್ತಿಗೆ ಸರಿಸಾಟಿಯಿಲ್ಲ. ಅದು ಬೃಹತ್ ಪ್ರಶಸ್ತಿಯಾಗಿದೆ. ಅದು ಆಯ್ಕೆಯಾದ ಪುಸ್ತಕ ಮತ್ತು ಅದರ ಲೇಖಕರಿಗೆ ಸಂಸ್ಕೃತಿಗಳು ಮತ್ತು ಭಾಷೆಗಳ ಎಲ್ಲ ಗಡಿಗಳನ್ನು ಮೀರಿ ಅಪಾರ ಗೋಚರತೆಯನ್ನು ನೀಡುತ್ತದೆ’ ಎಂದು ಮುಕುಂದನ್ ಪ್ರಶಸ್ತಿಯನ್ನು ಸ್ವೀಕರಿಸುತ್ತ ಹೇಳಿದರು. ಲೇಖಕರಿಗೆ 25 ಲಕ್ಷ ರೂ.ಗಳ ಜೊತೆಗೆ ಅನುವಾದಕರಿಗೂ 10 ಲಕ್ಷ ರೂ.ಗಳನ್ನು ಈ ಪ್ರಶಸ್ತಿಯು ನೀಡುತ್ತದೆ.







