ಲಿಬಿಯಾ: ಅಧ್ಯಕ್ಷೀಯ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಗಡಾಫಿ ಪುತ್ರ
ಟ್ರಿಪೋಲಿ, ನ.14: ಲಿಬಿಯಾದ ಸರ್ವಾಧಿಕಾರಿಯಾಗಿದ್ದ ಮೌಮರ್ ಗಡಾಫಿ ಪುತ್ರ ಸೈಫ್ ಅಲ್ ಇಸ್ಲಾಮ್ ಅಲ್ ಗಡಾಫಿ ದೇಶದಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಸಾಂಪ್ರದಾಯಿಕ ದಿರಿಸು ಧರಿಸಿದ್ದ 49 ವರ್ಷದ ಸೈಫ್ ಅಲ್ ಗಡಾಫಿ ಚುನಾವಣಾ ಆಯೋಗದ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುತ್ತಿರುವ ವೀಡಿಯೊ ಅಲ್ಲಿನ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಪ್ರಸಾರವಾಗಿದೆ. ಇದರೊಂದಿಗೆ ಅಧ್ಯಕ್ಷ ಹುದ್ದೆಗೆ ಪ್ರಬಲ ಆಕಾಂಕ್ಷಿಗಳಾಗಿರುವ ಪೂರ್ವ ಮಿಲಿಟರಿ ಕಮಾಂಡರ್ ಖಲೀಫಾ ಹಫ್ತರ್, ಪ್ರಧಾನಿ ಅಬ್ದುಲಹಮೀದ್ ಅಲ್ ಡಿಬೆಬಾ, ಸಂಸತ್ತಿನ ಸ್ಪೀಕರ್ ಆಗ್ವಿಲಾ ಸಲೇಹ್ ರ ಪಟ್ಟಿಯಲ್ಲಿ ಗಡಾಫಿಯ ಹೆಸರೂ ಕಾಣಿಸಿಕೊಂಡಿದೆ. 2011ರವರೆಗೆ ಲಿಬಿಯಾದ ಆಡಳಿತದ ಕಾರ್ಯನೀತಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸೈಫ್ ಅಲ್ ಗಡಾಫಿ, 2011ರಲ್ಲಿ ನೇಟೋ ನೇತೃತ್ವದ ಪಡೆಗಳು ಮೌಮರ್ ಗಡಾಫಿಯ ಯುಗವನ್ನು ಅಂತ್ಯಗೊಳಿಸಿದ ಬಳಿಕ ಸುಮಾರು 1 ದಶಕದವರೆಗೆ ತೆರೆಮರೆಗೆ ಸರಿದಿದ್ದರು.
ಗಡಾಫಿಯ ಅವಧಿಯ ಆಡಳಿತದ ಕಹಿನೆನಪು ಇನ್ನೂ ಹಲವು ಪ್ರಜೆಗಳ ಮನದಲ್ಲಿರುವುದರಿಂದ ಸೈಫ್ ಅಲ್ ಗಡಾಫಿಯ ಗೆಲುವು ಸುಲಭವಲ್ಲ. ಆದ್ದರಿಂದ ಅವರನ್ನು ಪ್ರಬಲ ಅಭ್ಯರ್ಥಿಯೆಂದು ಪರಿಗಣಿಸಲಾಗದು ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ. ಈ ಮಧ್ಯೆ, ಚುನಾವಣೆಯ ನೀತಿ ನಿಯಮದ ಬಗ್ಗೆ ಪ್ರಮುಖ ಪಕ್ಷಗಳ ಮಧ್ಯೆ ಭಿನ್ನಾಭಿಪ್ರಾಯ ತೀವ್ರವಾಗಿರುವುದರಿಂದ ಡಿಸೆಂಬರ್ 24ರಂದು ನಿಗದಿಯಾಗಿರುವ ಚುನಾವಣೆ ಮುಂದೂಡಲ್ಪಡುವ ಸಾಧ್ಯತೆಯಿದೆ ಎಂದೂ ಮಾಧ್ಯಮಗಳು ವರದಿ ಮಾಡಿದೆ.







