ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಆಡಳಿತ ಮಂಡಳಿಯಿಂದ ಫೋರ್ಜರಿ: ಆರೋಪ
ಭಕ್ತಾದಿಗಳಿಂದ ಪ್ರತಿಭಟನೆ

ಮಂಗಳೂರು, ನ.14: ಕುಲಶೇಖರ ಶ್ರೀವೀರನಾರಾಯಣ ದೇವಸ್ಥಾನದಲ್ಲಿ ಸದ್ಯ ಆಡಳಿತ ನಡೆಸುವ ಸಮಿತಿಯು ಫೋರ್ಜರಿ ದಾಖಲೆಗಳ ಮೂಲಕ ದೇವಳದ ಸಮಸ್ತ ಆಸ್ತಿಯನ್ನು ಕಬಳಿಸಿರುವ ಮತ್ತು ಸಾರ್ವಜನಿಕ ದೇವಸ್ಥಾನವನ್ನು ಒಂದು ಸಮುದಾಯದ ಆಸ್ತಿ ಎಂದು ತಪ್ಪು ಸಂದೇಶವನ್ನು ನೀಡಿ ಭಕ್ತರನ್ನು ದಾರಿ ತಪ್ಪಿಸುತ್ತಿರುವ ಬಗ್ಗೆ ಪರಿಸರದ ಭಕ್ತಾದಿಗಳು ಮತ್ತು ಸುಮಾರು 32 ಸಮಿತಿಗಳು ಸೇರಿ ದೇವಸ್ಥಾನದ ಸಮೀಪ ರವಿವಾರ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಶ್ರೀವೀರನಾರಾಯಣ ಸದ್ಭಕ್ತ ಸಮಿತಿಯ ಕಾರ್ಯದರ್ಶಿ ವಿಶ್ವಜೀತ್, ದೇವಸ್ಥಾನದ, ಸೇವಾ ರಶೀದಿ, ದೇವಸ್ಥಾನದ ನಾಮಫಲಕಗಳಲ್ಲಿ, ಆಮಂತ್ರಣ ಪತ್ರಿಕೆಗಳಲ್ಲಿ ಒಂದು ಸಮಾಜದ ಆಡಳಿತಕ್ಕೆ ಒಳಪಟ್ಟಿದೆಯೆಂದು ಪ್ರದರ್ಶಿಸುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳನ್ನು ನಿಲ್ಲಿಸದಿದ್ದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.
ಐತಿಹಾಸಿಕ ಹಿನ್ನೆಲೆಯುಳ್ಳ ಕುಲಶೇಖರ ರಾಜನಿಂದ ಸ್ಥಾಪಿಸಲ್ಪಟ್ಟ ದೇವಳದಲ್ಲಿ ಅವರ ಸಂಬಂಧಪಟ್ಟ ಶಾಸನಗಳು ಲಭ್ಯವಿದ್ದು, ಈಗಾಗಲೇ ಹಿಂದೂ ದೇವಸ್ಥಾನವು ಒಂದು ಸಮಾಜಕ್ಕೆ ಪರಿವರ್ತನೆಯಾಗುವುದನ್ನು ಪ್ರತಿಭಟಿಸಬೇಕಿದೆ. ದೇವಸ್ಥಾನದ ಆಡಳಿತವು ಊರಿನ ಎಲ್ಲಾ ಹಿಂದೂ ಸಮಾಜ ಬಾಂಧವರಿಗೆ ಒಳಪಟ್ಟಿರುವುದರಿಂದ ದೇವಸ್ಥಾನದ ಆಡಳಿತ ಮಂಡಳಿಯನ್ನು ತಕ್ಷಣವೇ ವಿಸರ್ಜಿಸಬೇಕು. ಹಿಂದೂ ಸಮಾಜದ ಎಲ್ಲಾ ವರ್ಗದ ಹಿರಿಯರನ್ನು ಸೇರಿಸಿಕೊಂಡು ಹೊಸದಾಗಿ ಆಡಳಿತ ಮಂಡಳಿಯನ್ನು ರಚಿಸುವಂತೆ ಧಾರ್ಮಿಕ ದತ್ತಿ ಇಲಾಖೆ ಮುಂದಾಗಬೇಕು. ಕಾಯ್ದೆ 23 ರನ್ವಯ ಧಾರ್ಮಿಕ ದತ್ತಿ ಇಲಾಖೆಗೆ ಸೇರ್ಪಡೆಗೊಳಿಸುವ ಮೂಲಕ ಹಿಂದೂ ಸಮಾಜದ ಎಲ್ಲಾ ವರ್ಗಗಳಿಗೂ ಸಾಮಾಜಿಕ ಹಕ್ಕನ್ನು ನೀಡಿಬೇಕು ಎಂದು ಅವರು ಆಗ್ರಹಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಕಾಶ್ಚಂದ್ರ, ಶ್ರೀ ವೀರನಾರಾಯಣ ದೇವಸ್ಥಾನಕ್ಕೆ ತನ್ನದೇ ಆದ ಅಸ್ತಿತ್ವವಿದ್ದು, ಸುಮಾರು 1,200 ವರ್ಷಗಳ ಇತಿಹಾಸವಿದೆ. ಸದ್ಯ ದೇವಸ್ಥಾನವು ಒಂದು ವರ್ಗದ ದೇವಸ್ಥಾನವಾಗಿ ಪರಿವರ್ತಿಸಲ್ಪಡುತ್ತಿರುವುದು ಬಹಳ ಖೇದಕರ. ದೇವಸ್ಥಾನವು ಹಿಂದೂ ಸಮಾಜದ ಸೊತ್ತು ಅದು ಒಂದು ಸಮುದಾಯಕ್ಕೆ ಸೀಮಿತವಾಗಬಾರದು. ಅದರಲ್ಲೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ದೇವಳದ ಆಸ್ತಿಯನ್ನು ಸ್ವಾಧೀನಪಡಿಸಿರುವುದು ಅಪರಾಧ ಎಂದರು.
ಶ್ರೀ ವೀರನಾರಾಯಣ ಸದ್ಭಕ್ತ ಸಮಿತಿಯ ಗೌರವಾಧ್ಯಕ್ಷ ಪಿ. ತ್ಯಾಂಪಣ್ಣ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿದರು.
ಭಾಸ್ಕರ ಪ್ರಭು, ರವಿ ಕುಮಾರ್ ಭಟ್ ಕಕ್ಕೆ ಬೆಟ್ಟು, ಶ್ರೀವೀರನಾರಾಯಣ ದೇವಸ್ಥಾನದ ಮಾಜಿ ಮೊಕ್ತೇಸರರಾದ ಸಚ್ಚಿದಾನಂದ, ಸತ್ಯನಾರಾಯಣ ಮರಾಠೆ, ಏಕನಾಥ್ ಕಟ್ಟೆಫ್ರೆಂಡ್ಸ್, ಪುಷ್ಪರಾಜ್, ತಾರನಾಥ್, ಶಿವಾನಂದ ಕೊಟ್ಯಾನ್ ಪ್ರಕಾಶ್ ಪೂಜಾರಿ, ಗಣೇಶ್ ಆಚಾರ್ಯ, ಗಣೇಶ್ ಹೆಬ್ಬಾರ್, ಜಯರಾಮ ಪೂಜಾರಿ, ರಮೇಶ್ ಕೋಟಿಮುರ, ಸುಧಾ ಅನಂತಪ್ರಭು, ರತ್ನಾವತಿ ಪ್ರಭು, ಹರಿಣಿ, ಲಲಿತಾ, ಅನುರಾಧ ಪ್ರಭು, ಗಣೇಶ್ ಪ್ರಭು, ಪ್ರಕಾಶ್ ಪ್ರಭು, ಮೋಹನ್ ಪ್ರಭು, ದೇವಳದ ಪರಿಸರದ ಭಕ್ತಾಧಿಗಳು, ಪದವು ಗ್ರಾಮದ ಸಾರ್ವಜನಿಕ ಸಂಘ ಸಂಸ್ಥೆಗಳು ಹಾಗೂ ಶ್ರೀ ದೇವರ ಕಟ್ಟೆ ಬಲಿ ಸವಾರಿ ಪೂಜಾ ಸಮಿತಿಗಳ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.







