ದೌರ್ಜನ್ಯಕ್ಕೊಳಗಾಗುವ ಮಕ್ಕಳಿಗೆ ಕಾನೂನಿನ ತುರ್ತು ಸ್ಪಂದನ ಅನಿವಾರ್ಯ: ನ್ಯಾ.ಪೃಥ್ವಿರಾಜ್ ವರ್ಣೇಕರ್
‘ಚೈಲ್ಡ್ ಲೈನ್ ಸೇ ದೋಸ್ತಿ’ ಉದ್ಘಾಟನೆ

ಮಂಗಳೂರು, ನ.14: ಮಕ್ಕಳು ವಿವಿಧ ರೀತಿಯ ದೌರ್ಜನ್ಯಕ್ಕೆ ಒಳಗಾಗುತ್ತಿದ್ದು, ಅಂತಹ ಮಕ್ಕಳಿಗೆ ಏಕಕಾಲದಲ್ಲಿ ತುರ್ತಾಗಿ ಸ್ಪಂದಿಸುವ ವ್ಯವಸ್ಥೆ ಕಲ್ಪಿಸುವುದು ಅನಿವಾರ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶ ಪೃಥ್ವಿರಾಜ್ ವರ್ಣೇಕರ್ ಹೇಳಿದ್ದಾರೆ.
ಚೈಲ್ಡ್ ಲೈನ್, ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತದ ಸಹಕಾರದಲ್ಲಿ ನಗರದ ರೋಶನಿ ನಿಲಯದಲ್ಲಿ ರವಿವಾರ ಆಯೋಜಿಸಿದ್ದ ‘ಚೈಲ್ಡ್ ಲೈನ್ ಸೇ ದೋಸ್ತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಕ್ಕಳಿಗಿರುವ ಕಾನೂನು, ಕಾಯ್ದೆಗಳ ಬಗ್ಗೆ ಸೂಕ್ತ ತಿಳುವಳಿಕೆ ಮಕ್ಕಳಿಗೆ ನೀಡುತ್ತಿರಬೇಕು. ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಾವೆಲ್ಲರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಮಂಗಳೂರು ಅಪರಾಧ ಮತ್ತು ಸಂಚಾರ ಪೊಲೀಸ್ ವಿಭಾಗದ ಡಿಸಿಪಿ ಬಿ.ಪಿ.ದಿನೇಶ್ ಕುಮಾರ್ ಮಾತನಾಡಿ, ಮಕ್ಕಳಿಗೆ ತುರ್ತು ರಕ್ಷಣೆ ಹಾಗೂ ಪೋಷಣೆಗೆ ಸಂಬಂಧಿಸಿದಂತೆ ಮಕ್ಕಳ ಸಹಾಯವಾಣಿ-1098ಕ್ಕೆ ಕರೆ ಮಾಡಬಹುದು ಹಾಗೂ ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿ ತಿಳಿಸಿದಲ್ಲಿ ತುರ್ತಾಗಿ ಸ್ಪಂದಿಸುವ ವ್ಯವಸ್ಥೆ ಪೊಲೀಸ್ ಇಲಾಖೆಯಲ್ಲಿದೆ. ಹಾಗೆಯೇ ಮಕ್ಕಳ ಸಂಬಂಧಿಸಿದ ಪ್ರಕರಣಗಳನ್ನು ನಿರ್ವಹಿಸಲು ಪ್ರತೀ ಪೊಲೀಸ್ ಠಾಣೆಯಲ್ಲಿ ಮಕ್ಕಳ ಕಲ್ಯಾಣ ಅಧಿಕಾರಿಯನ್ನು ನೇಮಿಸಲಾಗಿದ್ದು, ಅವರ ಜೊತೆ ಮಕ್ಕಳು ಮುಕ್ತವಾಗಿ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು ಎಂದರು.
ಈ ಸಂದರ್ಭ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರೆನ್ನಿ ಡಿಸೋಜ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಮಂಜುಳಾ, ಮಂಗಳೂರು ಜಂಕ್ಷನ್ ರೈಲ್ವೆ ಪೊಲೀಸ್ ಇಲಾಖೆಯ ಇನ್‌ಸ್ಪೆಕ್ಟರ್ ಮನೋಜ್ ಕುಮಾರ್ ಯಾದವು, ಸೆಂಟ್ರಲ್ ರೈಲ್ವೆ ಪೊಲೀಸ್ ಇಲಾಖೆಯ ಇನ್‌ಸ್ಪೆೆಕ್ಟರ್ ದಿಲೀಪ್, ಮಕ್ಕಳ ಹಕ್ಕುಗಳ ಮಾಸೋತ್ಸವದ ಸಂಚಾಲಕ ಮಂಜು ವಿಟ್ಲ, ಫ್ಯಾಮಿಲಿ ಸರ್ವಿಸ್ ಏಜೆನ್ಸಿಯ ನಿರ್ದೇಶಕ ಡಾ.ಜಸಿಂತಾ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು. ಚೈಲ್ಡ್ ಲೈನ್ ನೋಡಲ್ ಸಂಯೋಜಕಿ ಲವಿಟಾ ಡಿಸೋಜ ಸ್ವಾಗತಿಸಿದರು, ಸದಸ್ಯೆ ಜಯಂತಿ ವಂದಿಸಿದರು.
ಚೈಲ್ಡ್‌ಲೈನ್ ಕೇಂದ್ರ ಸಂಯೋಜಕ ದೀಕ್ಷಿತ್ ಅಚ್ರಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾಧಿಕಾರಿ ಕಚೇರಿಯಿಂದ ರೋಶನಿ ನಿಲಯದವರೆಗೆ ಬೈಸಿಕಲ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಬಳಿಕ ರೋಶನಿ ನಿಲಯದ ವಿದ್ಯಾರ್ಥಿಗಳಿಂದ ಬೀದಿ ನಾಟಕ ನಡೆಯಿತು.
''ತುರ್ತು ರಕ್ಷಣೆ ಮತ್ತು ಪೋಷಣೆಯ ಅಗತ್ಯವಿರುವ ಮಕ್ಕಳಿಗೆ ದಿನದ 24 ಗಂಟೆಗಳು ತುರ್ತು ಸೇವೆಯನ್ನು ಚೈಲ್ಡ್‌ಲೈನ್-1098 ನೀಡುತ್ತಾ ಬಂದಿದೆ. ಚೈಲ್ಡ್‌ಲೈನ್ ಸೇ ದೋಸ್ತಿ ಕಾರ್ಯಕ್ರಮವೆಂಬುದು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಮತ್ತು ಮಕ್ಕಳಿಗೆ ಸಂಬಂಧಿಸಿದ ವಿವಿಧ ಕಾನೂನು ಕಾಯ್ದೆಗಳ ಕುರಿತು ಮಾಹಿತಿಯ ಜೊತೆಗೆ ಜಿಲ್ಲೆಯಲ್ಲಿ ಚೈಲ್ಡ್ ಲೈನ್‌ನೊಂದಿಗೆ ಕೈಜೋಡಿಸಲು ಸ್ವಯಂ ಸೇವಕರನ್ನು ಹೆಚ್ಚಿಸುವ ಉದ್ದೇಶದಿಂದ ನ.20ರವರೆಗೆ ವಿವಿಧ ಕಾರ್ಯಕ್ರಮಗಳನ್ನು ದ.ಕ. ಜಿಲ್ಲಾದ್ಯಂತ ಹಮ್ಮಿಕೊಳ್ಳಲಾಗುತ್ತದೆ''.
-ಜೂಲಿಯೆಟ್ ಸಿ.ಜೆ.,
ಚೈಲ್ಡ್ ಲೈನ್-1098ರ ನೋಡಲ್ ನಿರ್ದೇಕಿ,
ಸ್ಕೂಲ್ ಆಫ್ ಸೋಶಿಯಲ್ ರ್ಕ್ ರೋಶನಿ ನಿಲಯದ ಪ್ರಾಂಶುಪಾಲೆ






.jpeg)


