ಟ್ಯುನೀಷಿಯ: ಅಧ್ಯಕ್ಷರ ವಿರುದ್ಧ ಬೃಹತ್ ಪ್ರತಿಭಟನೆ
ಟ್ಯೂನಿಸ್, ನ.14: ಸಂಸತ್ತನ್ನು ಅಮಾನತುಗೊಳಿಸಿ ರಾಜಕೀಯ ಅಧಿಕಾರವನ್ನು ಸ್ವಾಧೀನಪಡಿಸಿಕೊಂಡಿರುವ ಅಧ್ಯಕ್ಷರ ಕ್ರಮವನ್ನು ವಿರೋಧಿಸಿ ಟ್ಯುನೀಷಿಯಾದಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ ಎಂದು ವರದಿಯಾಗಿದೆ.
4 ತಿಂಗಳ ಹಿಂದೆ ಅಧ್ಯಕ್ಷ ಕಯಿಸ್ ಸಯೀದ್ ಸಂಸತ್ತನ್ನು ಅಮಾನತುಗೊಳಿಸಿದ್ದರು. ಸಂಸತ್ತನ್ನು ಮರುಸ್ಥಾಪಿಸಬೇಕು ಮತ್ತು ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆ ಜಾರಿಗೆ ಬರಬೇಕೆಂದು ಒತ್ತಾಯಿಸಿ ಸಾವಿರಾರು ಪ್ರತಿಭಟನಾಕಾರರು ಧ್ವಜ ಮತ್ತು ಘೋಷಣಾ ಫಲಕ ಹಿಡಿದುಕೊಂಡು ಅಧ್ಯಕ್ಷರ ನಿವಾಸದತ್ತ ಮೆರವಣಿಗೆಯಲ್ಲಿ ತೆರಳುತ್ತಿದ್ದಾಗ, ಸಂಸತ್ ಭವನದೆದುರು ಪೊಲೀಸರು ಅವರನ್ನು ತಡೆದರು. ಆಗ ಪ್ರತಿಭಟನಾಕಾರರು ಮತ್ತು ಪೊಲೀಸರ ಮಧ್ಯೆ ಘರ್ಷಣೆ ನಡೆದಿದೆ. ‘ಕಯೀಸ್ ಸಯೀದ್ರನ್ನು ತಡೆಯಿರಿ’, ಸ್ವಾತಂತ್ರ್ಯ, ಪೊಲೀಸ್ ಆಡಳಿತ ಕೊನೆಯಾಗಲಿ’ ಮುಂತಾಗಿ ಘೋಷಣೆ ಕೂಗುತ್ತಾ ಪ್ರತಿಭಟನೆಕಾರರು ಪೊಲೀಸ್ ಬ್ಯಾರಿಕೇಡ್ಗಳನ್ನು ಪಕ್ಕಕ್ಕೆ ತಳ್ಳಿ ಮುಂದುವರಿದಾಗ ಘರ್ಷಣೆ ಆರಂಭವಾಯಿತು.
ಜುಲೈ 25ರಿಂದ ದೇಶದಲ್ಲಿ ಓರ್ವ ವ್ಯಕ್ತಿಯ ಆಡಳಿತವಿದೆ. ಇದನ್ನು ಅಂತ್ಯಗೊಳಿಸುವ ವರೆಗೆ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿರುವುದಾಗಿ ‘ರಾಯ್ಟರ್ಸ್’ ವರದಿ ಮಾಡಿದೆ. ಜುಲೈಯಲ್ಲಿ ಸಂಸತ್ತನ್ನು ಅಮಾನತುಗೊಳಿಸಿದ್ದ ಅಧ್ಯಕ್ಷ ಸಯೀದ್, ಸರಕಾರವನ್ನು ವಜಾಗೊಳಿಸಿದ್ದರು. ಹಲವಾರು ವರ್ಷಗಳಿಂದ ನಿಷ್ಕ್ರಿಯವಾಗಿರುವ ಸರಕಾರವನ್ನು ವಜಾಗೊಳಿಸದಿದ್ದರೆ ದೇಶದ ಅರ್ಥವ್ಯವಸ್ಥೆಗೆ ಪುನಶ್ಚೇತನ ನೀಡಲು ಸಾಧ್ಯವಾಗದು ಎಂಬ ಕಾರಣಕ್ಕೆ ಸಂಸತ್ತನ್ನು ಅಮಾನತಿನಲ್ಲಿರಿಸಿದ್ದೇನೆ ಎಂದು ಸಯೀದ್ ಹೇಳಿದ್ದರು. ಆದರೆ ಸಯೀದ್ ನಡೆಸಿದ್ದು ಕ್ಷಿಪ್ರಕ್ರಾಂತಿ ಎಂದು ವ್ಯಾಪಕ ಟೀಕೆ ವ್ಯಕ್ತವಾಗಿತ್ತು.







