ಸಾಕ್ಷರತಾ ಅಭಿಯಾನ: 104ರ ಹಿರಿಯಜ್ಜಿಗೆ ಇನ್ನೂ ಕಲಿಯುವ ಉತ್ಸಾಹ!

ಕೊಟ್ಟಾಯಂ: ಕೇರಳ ಸರ್ಕಾರದ ಸಾಕ್ಷರತಾ ಕಾರ್ಯಕ್ರಮದ ಯಶಸ್ಸನ್ನು 104 ವರ್ಷದ ಹಿರಿಯಜ್ಜಿಯೊಬ್ಬರು ಮತ್ತೆ ದೇಶಕ್ಕೆ ಸಾರಿದ್ದಾರೆ. ಕೇರಳದ ಶಿಕ್ಷಣ ಸಚಿವ ವಾಸುದೇವನ್ ಶಿವನ್ ಕುಟ್ಟಿ ಅವರು 104 ವರ್ಷ ವಯಸ್ಸಿನ ಕುಟ್ಟಿಯಮ್ಮ ಅವರ ಭಾವಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ, ರಾಜ್ಯ ಸರ್ಕಾರದ ನಿರಂತರ ಕಲಿಕೆ ಅಭಿಯಾನದಡಿ ನಡೆಸಿದ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಕುಟ್ಟಿಯಮ್ಮ ಅವರಿಗೆ ಶುಭ ಹಾರೈಸಿದ್ದಾರೆ.
"ಕೇರಳ ರಾಜ್ಯ ಸಾಕ್ಷರತೆ ಪರೀಕ್ಷೆಯಲ್ಲಿ ಕೊಟ್ಟಾಯಂನ 104 ವರ್ಷ ವಯಸ್ಸಿನ ಕುಟ್ಟಿಯಮ್ಮ 100ಕ್ಕೆ 89 ಅಂಕ ಪಡೆದಿದ್ದಾರೆ. ಜ್ಞಾನದ ಜಗತ್ತು ಪ್ರವೇಶಿಸಲು ವಯಸ್ಸು ತಡೆಯಾಗದು. ಅತ್ಯಂತ ಗೌರವ ಹಾಗೂ ಪ್ರೀತಿಯಿಂದ ನಾನು ಕುಟ್ಟಿಯಮ್ಮ ಮತ್ತು ಇತರ ಎಲ್ಲ ಹೊಸ ಕಲಿಕಾರ್ಥಿಗಳಿಗೆ ಶುಭ ಹಾರೈಸುತ್ತಿದ್ದೇನೆ" ಎಂಬ ಶೀರ್ಷಿಕೆಯೊಂದಿಗೆ ಕುಟ್ಟಿಯಮ್ಮ ಅವರ ಚಿತ್ರವನ್ನು ಶೇರ್ ಮಾಡಿದ್ದಾರೆ.
ರಾಜ್ಯ ಸರ್ಕಾರದಿಂದ ಅನುದಾನ ಪಡೆಯುವ ಕೇರಳ ರಾಜ್ಯ ಸಾಕ್ಷರತೆ ಮಿಷಿನ್ ಪ್ರಾಧಿಕಾರ ರಾಜ್ಯದಲ್ಲಿ ಸಾಕ್ಷರತೆ, ನಿರಂತರ ಶಿಕ್ಷಣ ಮತ್ತು ಎಲ್ಲ ನಾಗರಿಕರ ಜೀವನಪೂರ್ತಿ ಕಲಿಕೆ ಕಾರ್ಯಕ್ರಮಗಳಿಗೆ ಉತ್ತೇಜನ ನೀಡುತ್ತಿದೆ. ಪ್ರಸ್ತುತ ಇದು 4, 7, 10, 11 ಹಾಗೂ 12ನೇ ತರಗತಿಯ ತತ್ಸಮಾನ ಪರೀಕ್ಷೆಗಳನ್ನು ನಡೆಸುತ್ತಿದೆ.
104-year-old Kuttiyamma from Kottayam has scored 89/100 in the Kerala State Literacy Mission’s test. Age is no barrier to enter the world of knowledge. With utmost respect and love, I wish Kuttiyamma and all other new learners the best. #Literacy pic.twitter.com/pB5Fj9LYd9
— V. Sivankutty (@VSivankuttyCPIM) November 12, 2021