ನಾಗಬನಕ್ಕೆ ದುಷ್ಕರ್ಮಿಗಳಿಂದ ಹಾನಿ ಪ್ರಕರಣ; ಕೋಡಿಕಲ್ ಬಂದ್ ಮಾಡಿ ಪ್ರತಿಭಟನೆ

ಮಂಗಳೂರು, ನ. 15: ಕೋಡಿಕಲ್ ಪರಿಸರದ ನಾಗಬನಕ್ಕೆ ಹಾನಿ ಎಸಗಿದ ದುಷ್ಕೃತ್ಯವನ್ನು ಖಂಡಿಸಿ ಸೋಮವಾರ ವಿಶ್ವ ಹಿಂದೂ ಪರಿಷತ್-ಬಜರಂಗ ದಳದ ವತಿಯಿಂದ ಕೋಡಿಕಲ್ ನಲ್ಲಿ ಪ್ರತಿಭಟನೆ ನಡೆಯಿತು.
ಬಸ್ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಅಂಗಡಿಗಳು ಬಂದ್ ಆಗಿವೆ. ಇಂದು ಸಂಜೆಯವರೆಗೆ ಈ ಪ್ರತಿಭಟನೆ ನಡೆಯಲಿದೆ ಎಂದು ಸಂಘಟನೆಯ ಪ್ರಮುಖರು ತಿಳಿಸಿದ್ದಾರೆ. ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಬಜರಂಗದಳ, ಹಿಂದೂ ಜಾಗರಣ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದವು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಶರಣ್ ಪಂಪ್‌ವೆಲ್ ಇಂತಹ ಕೃತ್ಯ ಮಾಡುವವರನ್ನು ಎನ್‌ಕೌಂಟರ್ ಮಾಡಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿ ಕರಾವಳಿ ಬಗ್ಗೆ ಗಮನ ಕೊಡಬೇಕು. ಹಿಂದುತ್ವಕ್ಕಾಗಿ ಇಲ್ಲಿನವರು ಮತ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕೋಡಿಕಲ್ ಕಟ್ಟೆ ಗ್ರೌಂಡ್‌ನಲ್ಲಿ ಪ್ರತಿಭಟನಾ ಸಭೆಯ ಬಳಿಕ ನಾಗಬನಕ್ಕೆ ಮೆರವಣಿಗೆ ಮೂಲಕ ತೆರಳಿ ಅಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
24 ದಿನಗಳೊಳಗೆ ಬಂಧಿಸದಿದ್ದರೆ ಜಿಲ್ಲೆ ಬಂದ್ ಎಚ್ಚರಿಕೆ
''ಕೂಳೂರಿನಲ್ಲಿ ಇಂತಹ ಘಟನೆ ಆದಾಗ 24 ಗಂಟೆ ಅವಧಿ ನೀಡಿದ್ದೆವು. ಅಲ್ಲಿನ ಪ್ರಕರಣಕ್ಕೆ ಸಂಬಂಧಿಸಿ ಯಾರೋ ಒಬ್ಬ ಹುಚ್ಚನನ್ನು ಬಂಧಿಸಿ ಅವನೇ ಮಾಡಿರುವುದಾಗಿ ಸಾಬೀತು ಮಾಡಲು ಹೊರಟಿದ್ದಾರೆ. ಆವಾಗ ಪೊಲೀಸರಿಗೆ ಅವನು ಅಲ್ಲಿ ಆ ಕೃತ್ಯ ಎಸಗಿದ್ದಾನೆಂಬುದನ್ನು ಸಾಕ್ಷಿ ಮಾಡುವಂತೆ ಹೇಳಿದ್ದೆವು. ಅದು ಆಗಿಲ್ಲ. ಇದೀಗ ಮತ್ತೆ ಇಂತಹ ಘಟನೆ ನಡೆದಿದೆ. ಪೊಲೀಸರು ಅಸಹಾಯಕತೆಯನ್ನು ಪ್ರದರ್ಶಿಸುತ್ತಿದ್ದಾರೆ. ಯಾವುದೇ ಕುರುಹು ಇಲ್ಲ ಎನ್ನುತ್ತಿದ್ದಾರೆ. ಹಿಂದೆ ನಿಮ್ಮ ಅಧಿಕಾರಿಗಳು ಯಾವುದೇ ಕುರುಹು ಇಲ್ಲದ ಪ್ರಕರಣಗಳನ್ನು ಪತ್ತೆ ಮಾಡಿ ರಾಷ್ಟ್ರಪತಿ, ರಾಜ್ಯಪಾಲರ ಪದಕವನ್ನು ಪಡೆದಿದ್ದಾರೆ. ಹಾಗಾಗಿ ಇದನ್ನು ಕೂಡಾ ತನಿಖೆ ಮಾಡಿ ನಮ್ಮ ಧಾರ್ಮಿಕ ಪದಕ ಪಡೆಯುವಂತೆ ನಾವು ಆಗ್ರಹ ಮಾಡಿದ್ದೇವೆ. ಮಾಡುತ್ತಾರೆಂಬ ನಂಬಿಕೆ ಇದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದೆ ಹಿಂದೂ ಸಮಾಜವೇ ರೊಚ್ಚಿಗೇಳಬಹುದು. ಅದಕ್ಕೆ ನಾವು ಹೊಣೆಯಲ್ಲ. ಕೋಮುಗಲಭೆ ಸೃಷ್ಟಿಸುವ ಸಂಚು ನಡೆಯುತ್ತಿದ್ದು, 24 ದಿನಗಳೊಳಗೆ ದುಷ್ಕರ್ಮಿಗಳನ್ನು ಬಂಧಿಸಬೇಕು. ಇಲ್ಲವಾದಲ್ಲಿ ಮಂಗಳೂರು ಜಿಲ್ಲೆ ಬಂದ್ ಆಗಬಹುದು''.
- ರಾಜಶೇಖರಾನಂದ ಸ್ವಾಮೀಜಿ, ವಜ್ರದೇಹಿ ಮಠ, ಗುರುಪುರ













