ಪೇಜಾವರ ಶ್ರೀಗಳ ಕುರಿತು ಹೇಳಿಕೆ: ಕ್ಷಮೆ ಕೋರಿದ ಹಂಸಲೇಖ

ಬೆಂಗಳೂರು: ಪೇಜಾವರ ಶ್ರೀಗಳ ಕುರಿತು ಚಲನಚಿತ್ರ ಸಂಗೀತ ನಿರ್ದೇಶಕ ಹಂಸ ಲೇಖ ಅವರ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವಿವಾದ ಸೃಷ್ಟಿಸಿದ್ದು, ಬಳಿಕ ಹಂಸ ಲೇಖ ಅವರು ವೀಡಿಯೋ ಮೂಲಕ ಕ್ಷಮೆ ಕೋರಿದ್ದಾರೆ.
ಸಾರ್ವಜನಿಕ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ್ದ ಹಂಸಲೇಖ ಅವರು, ಪೇಜಾವರ ಶ್ರೀಗಳ ಬಗ್ಗೆ ಹೇಳಿಕೆ ನೀಡಿದ್ದರೆನ್ನಲಾಗಿದೆ. ಜಾತಿ ವ್ಯವಸ್ಥೆ ವಿಚಾರವಾಗಿ ಮಾತನಾಡುತ್ತಾ ಪೇಜಾವರ ಶ್ರೀಗಳ ಬಗ್ಗೆ ಹಂಸಲೇಖ ಮಾತನಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವಿವಾದ ಹುಟ್ಟುಹಾಕಿತ್ತು. ಫೇಸ್ಬುಕ್ನಲ್ಲಿ ಕೆಲವರು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡಿ ವಿಡಿಯೋ ಹಂಚಿಕೊಂಡಿದ್ದರು.
ಇದೀಗ ಈ ವಿಚಾರಕ್ಕೆ ವೀಡಿಯೋ ಮೂಲಕವೇ ಕ್ಷಮೆ ಕೇಳೀರುವ ಹಂಸಲೇಖ, 'ನನಗೆ ಗೊತ್ತಿದೆ. ಎಲ್ಲಾ ಮಾತುಗಳಿಗೂ ಅದು ವೇದಿಕೆಯಲ್ಲ, ತಪ್ಪು. ಆ ವೇದಿಕೆಯಲ್ಲಿ ನುಡಿದರೆ ಮುತ್ತಿನಹಾರದಂತಿರಬೇಕು ಎಂದು ಇರಬೇಕಿತ್ತು. ಆದರೆ, ತಪ್ಪಾಗಿದೆ. ಅಸ್ಪೃಶ್ಯತೆ ಎಂಬುದು ನಮ್ಮ ದೇಶಕ್ಕೆ ಅಂಟಿದ ಶಾಪ. ಇದು ನನ್ನ ಮಾತಲ್ಲ, ಜಿಡ್ಡು ಕೃಷ್ಣ ಮೂರ್ತಿಗಳ ಹೇಳಿಕೆ. ಈ ಅನಿಷ್ಠವನ್ನು ತೊಡೆದು ಹಾಕುವುದಕ್ಕೆ ಪೇಜಾವರರಂಥ ಗುರುಹಿರಿಯರು ಅಪಾರ ಪ್ರಯತ್ನ ನಡೆಸುತ್ತಿದ್ದಾರೆ. ಅದರ ಬಗ್ಗೆ ನನಗೆ ಆ ಬಗ್ಗೆ ಅಪಾರ ಗೌರವವಿದೆ ಎಂದು ಹೇಳಿದ್ದಾರೆ.
ನಾನು ಒಬ್ಬ ಸಂಗೀತಗಾರನಾಗಿದ್ದು, ನಮಗ್ಯಾಕೆ ಟ್ರೋಲು, ನನಗೆ ಯಾರಿಗೂ ನೋವು ಕೊಡಲು ಇಷ್ಟವಿಲ್ಲ. ನನ್ನ ಸಂಗೀತದಂತೆ ನನ್ನ ಮಾತು, ಬದುಕು ಕೂಡ ಎಲ್ಲರಿಗೂ ಸುಖ ಕೊಡಬೇಕು. ನನಗೆ ಯಾರ ಮನಸ್ಸನ್ನು ನೋಯಿಸುವ ಉದ್ದೇಶ ಇಲ್ಲ, ಆದರೆ ಈ ಎಲ್ಲಾ ಅನಿಷ್ಠಗಳನ್ನು ತೊಡೆದು ಹಾಕುವ ದಿಸೆಯಲ್ಲಿ ನನ್ನ ಪಾತ್ರವೂ ಯಾವುದೇ ಮೂಲಕ ಇದ್ದರೆ ಅದನ್ನು ನಾನು ಮಾಡಿಯೇ ಮಾಡ್ತೇನೆ ' ಎಂದು ವೀಡಿಯೋದಲ್ಲಿ ಹೇಳಿದ್ದಾರೆ.







