ಹಂಸಲೇಖರ ಟೀಕೆ ವಿರುದ್ಧ ನಾವು ಯಾವುದೇ ಪ್ರತಿಭಟನೆ ನಡೆಸುವುದಿಲ್ಲ: ಪೇಜಾವರ ಶ್ರೀ

ಪೇಜಾವರ ಶ್ರೀ-ಹಂಸಲೇಖ
ಉಡುಪಿ, ನ.15: ಪೇಜಾವರ ಶ್ರೀವಿಶ್ವೇಶರ ತೀರ್ಥ ಸ್ವಾಮೀಜಿ ದಲಿತ ಕೇರಿ ಭೇಟಿಯ ಕುರಿತ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರ ಟೀಕೆಗೆ ಪ್ರತಿಕ್ರಿಯಿಸಿರುವ ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪದ್ಮ ವಿಭೂಷಣ ಪ್ರಶಸ್ತಿ ಬಂದಿರುವುದು ನನ್ನ ಗುರುಗಳಿಗೆ. ಹಾಗಾಗಿ ಹಂಸಲೇಖ ಅವರು ನನ್ನ ಗುರುಗಳನ್ನೇ ಟೀಕಿಸಲೇಬೇಕು. ಇಂತಹ ಮಾತು ಹಂಸಲೇಖ ಅವರ ಬಾಯಿಂದ ಬರಬಾರದಿತ್ತು ಎಂದು ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಸ್ವಾಮೀಜಿ, ಸಮಾಜ ಅವರನ್ನು ಎತ್ತರದಲ್ಲಿ ಇರಿಸಿ ಗೌರವಿಸುತ್ತದೆ. ಪ್ರಚಾರಕ್ಕಾಗಿ ಸಾಕಷ್ಟು ಮಂದಿ ಹೀಗೆ ಮಾಡುತ್ತಾರೆ. ಹಂಸಲೇಖ ಅವರಿಗೆ ಇದರಿಂದ ಪ್ರಚಾರ ಬೇಕಾಗಿರಲಿಲ್ಲ. ಶ್ರೀಕೃಷ್ಣನಿಗೆ ಅಗ್ರಪೂಜೆ ನೀಡುವಾಗ ಶಿಶುಪಾಲನು ಇದೇ ರೀತಿ ವಿರೋಧಿಸಿದ್ದನು. ಶಿಶುಪಾಲನಿಗೆ ಕೃಷ್ಣನೇ ತಕ್ಕಶಾಸ್ತಿಯನ್ನು ಮಾಡಿದ್ದ ಎಂದರು.
ನನ್ನ ಗುರುಗಳು ಸಮಾಜದ ಎಲ್ಲರ ಹೃದಯದಲ್ಲಿ ಕಷ್ಣನನ್ನು ಕಂಡವರು. ಆದ್ದರಿಂದಲೇ ಅವರು ದಲಿತರ ಕೇರಿಗೂ ಹೋಗುತ್ತಿದ್ದರು. ನೆರೆಹಾವಳಿ ಭೂಕಂಪ ಸಂಭವಿಸಿದಾಗಲೂ ಅಲ್ಲಿಗೆ ಭೇಟಿ ನೀಡುತ್ತಿದ್ದರು. ಸಮಾಜದ ಎಲ್ಲರ ಉದ್ಧಾರವನ್ನು ವಿಶ್ವೇಶತೀರ್ಥರು ಬಯಸಿದ್ದರು. ಗುರುಗಳು ಯಾರ ಹೃದಯ ದಲ್ಲಿ ಕೃಷ್ಣನನ್ನು ಕಂಡಿದ್ದರೋ ಅಂತಹ ಕೃಷ್ಣನೇ ಅದಕ್ಕೆ ಬೇಕಾದ ಪ್ರತಿಕಾರ ಮಾಡುತ್ತಾನೆ ಎಂದು ಅವರು ತಿಳಿಸಿದರು.
ನಮ್ಮ ಉದ್ದೇಶ ಪ್ರಾಮಾಣಿಕವಾಗಿದೆ. ಯಾರೋ ಏನೋ ಅಂದ ಮಾತ್ರಕ್ಕೆ ನಮ್ಮ ಕೆಲಸ ನಿಲ್ಲಿಸುವುದಿಲ್ಲ. ಯಾರ ಹೊಗಳಿಕೆಗೂ ನಾವು ಈ ಕೆಲಸವನ್ನು ಮಾಡಿದ್ದಲ್ಲ. ದಲಿತರ ಜೊತೆ ನಾವು ಇದ್ದೇವೆ. ದಲಿತರು ನಮ್ಮಿಂದ ಹೊರತಲ್ಲ. ಈ ಐಕ್ಯ ಸಂದೇಶ ನೀಡುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಗುರುಗಳ ಅಭಿಮಾನದಿಂದ ಯಾರಾದರೂ ಪ್ರತಿಭಟಿಸಿದರೆ ಅದು ಅವರವರ ವೈಯಕ್ತಿಕ ವಿಚಾರ. ನಾವಂತೂ ಯಾವುದೇ ಪ್ರತಿಭಟನೆ ನಡೆಸುವುದಿಲ್ಲ ಎಂದು ಅವರು ಹೇಳಿದರು.







