ಕಡೂರು: ಬಾರ್ ವಿರುದ್ಧ ಪ್ರತಿಭಟನೆ ಪ್ರಕರಣ; 7 ಮಂದಿಯ ಬಂಧನ
ಪೊಲೀಸರ ವರ್ತನೆಗೆ ಸ್ಥಳೀಯರ ಆಕ್ರೋಶ

ಕಡೂರು: 'ನಮ್ಮ ಹಳ್ಳಿಗೆ ಬಾರ್ ಬೇಡ' ಎಂದು ಬಾರ್ ವಿರುದ್ಧ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದ ಮೂವರು ಮಹಿಳೆಯರು ಸೇರಿದಂತೆ 7ಮಂದಿಯನ್ನು ಪೊಲೀಸರು ಬಂಧಿಸಿದ್ದು, ಪೊಲೀಸರ ವರ್ತನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮುಸ್ಲಾಪುರ ಗ್ರಾಮದಲ್ಲಿ ಬಾರ್ ವಿರುದ್ಧ ಠಾಣೆ ಮುಂದೆ ಪ್ರತಿಭಟಿಸಿದ್ದ ಗ್ರಾಮಸ್ಥರು ನಮ್ಮ ಹಳ್ಳಿಗೆ ಬಾರ್ ಬೇಡ ಎಂದು ಒತ್ತಾಯಿಸಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ಬೆಳ್ಳಂಬೆಳಗ್ಗೆ ಗ್ರಾಮಕ್ಕೆ ಆಗಮಿಸಿರುವ ಪೊಲೀಸರು 7ಮಂದಿಯನ್ನು ಬಂಧಿಸಿದ್ದಾರೆ.
ಪೊಲೀಸರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು, ಏಕಾ ಏಕಿ ಮನೆಗೆ ನುಗ್ಗಿ ಅಪ್ರಾಪ್ತ ಬಾಲಕ, ಮೂವರು ಮಹಿಳೆಯರು ಸೇರಿದಂತೆ 7 ಜನರನ್ನು ಬಂಧಿಸಿರರುವುದಾಗಿ ಆರೋಪಿಸಿದ್ದಾರೆ.
ಸೋಮವಾರ ಮುಂಜಾನೆ ಪೊಲೀಸರು ಮುಸ್ಲಾಪುರ ಗ್ರಾಮದಲ್ಲಿ ದಾಳಿ ನಡೆಸಿ ಗೂಂಡಾವರ್ತನೆ ತೋರಿರುವ ಘಟನೆಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಡೂರು ಪಿಎಸೈ ರಮ್ಯಾ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಗ್ರಾಮಸ್ಥರ ವಿರೋಧದ ಮಧ್ಯೆಯೂ ಮದ್ಯದಂಗಡಿ ಹಾಗೂ ಬಾರ್ ತೆರೆಯುತ್ತಿರುವ ಉದ್ದೇಶವೇನು? ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ಈ ಬಾರ್‍ನ ಹಿಂದೆ ಇರುವುದರಿಂದ ಪೊಲೀಸ್ ಇಲಾಖೆ ಸೇರಿದಂತೆ ಜಿಲ್ಲಾಡಳಿತ, ಅಬಕಾರಿ ಇಲಾಖೆ ಬಾರ್ ಮಾಲಕರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಗ್ರಾಮಸ್ಥರ ಮಾತಿಕ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಬಾರ್ ಮಾಲಕರು ಪೊಲೀಸ್ ಇಲಾಖೆಯನ್ನು ಮುಂದಿಟ್ಟುಕೊಂಡು ಗ್ರಾಮದ ಜನರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ ಎಂದು ಮುಸ್ಲಾಪುರ ಗ್ರಾಮಸ್ಥರು ಆರೋಪಿಸಿದ್ದಾರೆ.
ಬಾರ್ ನಲ್ಲಿ ಪ್ರತಿಭಟನೆ ಹೆಸರಿನಲ್ಲಿ ದಾಂಧಲೆ ಮಾಡಿರುವ ಆರೋಪಿಗಳ ವಿರುದ್ಧ ಮದ್ಯದಂಗಡಿ ಮಾಲಕರು ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರು ಮುಸ್ಲಾಪುರ ಗ್ರಾಮದಲ್ಲಿ ಯಾವುದೇ ಗೂಂಡಾವರ್ತನೆ ತೋರಿಲ್ಲ. ಸ್ಥಳೀಯ ಕೆಲ ವ್ಯಕ್ತಿಗಳ ಪ್ರಚೋದನೆ ಮೇರೆಗೆ ಮನೆ ಬಾಗಿಲು ಒಡೆದಿದ್ದಾರೆ, ಹೆಂಚು ತೆಗೆದು ಒಳ ನುಗ್ಗಿದ್ದಾರೆಂದು ವಿಡಿಯೋ ಮಾಡಿ ವೈರಲ್ ಮಾಡಲಾಗಿದೆ. ಈ ಸಂಬಂಧ ಪರಿಶೀಲಿಸಿ ಕ್ರಮವಹಿಸಲಾಗುವುದು.
- ಎಂ.ಎಚ್.ಅಕ್ಷಯ್, ಎಸ್ಪಿ







