ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವ ಹೊಣೆ ನಾಗರಿಕ ಸಮಾಜದ್ದು : ಉಡುಪಿ ಡಿಸಿ ಕೂರ್ಮಾರಾವ್

ಉಡುಪಿ, ನ.15: ಮಕ್ಕಳಿಗೆ ಬಾಲ್ಯದಲ್ಲಿಯೇ ಉತ್ತಮ ಆರೋಗ್ಯದಾಯಕ ವಾತಾವರಣ ಕಲ್ಪಿಸಿ, ಶಿಕ್ಷಣವನ್ನು ನೀಡುವುದ ರೊಂದಿಗೆ ಅವರನ್ನು ಭವಿಷ್ಯದಲ್ಲಿ ಉತ್ತಮ ಪ್ರಜೆಯನ್ನಾಗಿಸುವ ಜವಾಬ್ದಾರಿ ನಾಗರಿಕ ಸಮಾಜದ್ದಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ಮಣಿಪಾಲದಲ್ಲಿರುವ ಜಿಲ್ಲಾಡಳಿತ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ, ಮಕ್ಕಳ ಸಹಾಯವಾಣಿ 1098 ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ‘ಮಕ್ಕಳ ದಿನಾಚರಣೆ ಮತ್ತು ಚೈಲ್ಡ್‌ಲೈನ್ ಸೇ ದೋಸ್ತಿ ಸಪ್ತಾಹ’ದ ಅಂಗವಾಗಿ ನಡೆದ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸರಕಾರ ಮಕ್ಕಳ ರಕ್ಷಣೆಗೆ ಅನೇಕ ಕಾನೂನುಗಳನ್ನು ಜಾರಿಗೆ ತರುವುದ ರೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಆದರೂ ಸಮಾಜದಲ್ಲಿ ಬಾಲಕಾರ್ಮಿಕ ಪದ್ಧತಿ, ಭಿಕ್ಷಾಟನೆ, ಬಾಲ್ಯ ವಿವಾಹ ಸೇರಿದಂತೆ ಅನೇಕ ಅನಿಷ್ಟ ಪದ್ಧತಿಗಳು ಇನ್ನೂ ಅಲ್ಪಪ್ರಮಾಣದಲ್ಲಿನಡೆಯುತ್ತಿವೆ. ಇವುಗಳನ್ನು ಹೋಗಲಾಡಿಸುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ ಎಂದರು.
ಸಾರ್ವಜನಿಕರು ಮಕ್ಕಳ ಮೇಲಾಗುವ ದೌರ್ಜನ್ಯ ಸೇರಿದಂತೆ ಅವರುಗಳ ಹಕ್ಕುಗಳ ಉಲ್ಲಂಘನೆ ಸಂಬಂಧಿಸಿದಂತೆ ಯಾವುದೇ ಪ್ರಕರಣಗಳು ನಡೆದಲ್ಲಿ ಅಥವಾ ಗಮನಕ್ಕೆ ಬಂದರೆ ಚೈಲ್ಡ್‌ಲೈನ್ 1098ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಲ್ಲಿ ರಕ್ಷಣೆ ನೀಲು ಅನುಕೂಲವಾಗುತ್ತದೆ ಎಂದರು.
ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲೆಯ ಪ್ರತಿಯೊಂದು ಶಾಲೆಗೂ ಸುರಕ್ಷತಾ ಅಧಿಕಾರಿಗಳನ್ನು ನೇಮಕ ಮಾಡಿ ಅವರಿಗೆ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಅವರುಗಳು ಶಾಲೆಯ ಪ್ರತಿಯೊಬ್ಬ ದ್ಯಾರ್ಥಿಗಳಿಗೂ ಅರಿವು ಮೂಡಿಸುವ ಕಾರ್ಯಗಳನ್ನು ಕೈಗೊಳ್ಳಲಿದ್ದಾರೆ ಎಂದರು.
ಮಕ್ಕಳು ತಮಗಾದ ಅನ್ಯಾಯವನ್ನು ಪ್ರಶ್ನಿಸುವಂತಹ ಮನೋಭಾವವನ್ನು ಬೆಳೆಸಿಕೊಳ್ಳುವುದರ ಜೊತೆಗೆ ತಮ್ಮ ಕರ್ತವ್ಯಗಳನ್ನು ತಪ್ಪದೇ ನಿಭಾಯಿಸಬೇಕು ಎಂದೂ ಕೂರ್ಮಾರಾವ್ ಹೇಳಿದರು.
ಪ್ರಸ್ತುತ ಕೋವಿಡ್ ಸೋಂಕಿನ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಶಾಲೆಗಳನ್ನು ತೆರೆಯಲಾಗಿದೆ. ವಿದ್ಯಾರ್ಥಿಗಳು ಶಾಲೆಗೆ ಹೋಗಿ ಬರಲು ಅನುಕೂಲವಾಗಲು ಬಸ್‌ಗಳ ಸಂಚಾರ ಕಲ್ಪಿಸುವಂತೆ ಸಾರಿಗೆ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದೂ ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಮನೆಯ ಹಾಗೂ ಶಾಲೆಯ ಸುತ್ತಮುತ್ತಲಿನ ಪರಿಸರವನ್ನು ಉತ್ತಮವಾಗಿ ಇಟ್ಟುಕೊಳ್ಳಬೇಕು. ಇದರಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದ ಅವರು, ದೊಡ್ಡ ಪ್ರಮಾಣದಲ್ಲಿ ಕಸವನ್ನು ಎಲ್ಲೆಂದರಲ್ಲಿ ಹಾಕುವುದು ಕಂಡುಬಂದರೆ ಈ ಬಗ್ಗೆ ಸ್ಥಳೀಯ ಸಂಸ್ಥೆಗಳಿಗೆ ಮಾಹಿತಿ ನೀಡಬೇಕು ಎಂದರು.
ಮಕ್ಕಳು ತಮ್ಮ ಸ್ನೇಹಿತರು ಸೇರಿದಂತೆ ಇತರೆ ಮಕ್ಕಳಿಗೆ ತೊಂದರೆ ಉಂಟಾದಾಗ ಚೈಲ್ಡ್‌ಲೈನ್‌ಗೆ ಮಾಹಿತಿಯನ್ನು ನೀಡಿದಾಗ ಅಂತಹವರನ್ನು ರಕ್ಷಿಸಲು ಸಾಧ್ಯ. ಇದಕ್ಕೆ ಎಲ್ಲರೂ ಸ್ಪಂದಿಸಬೇಕು ಎಂದರು.
ಕೋವಿಡ್ ಪಿಡುಗು ಹೆಚ್ಚಿರುವ ಸಂದರ್ಭದಲ್ಲಿ ಆನ್‌ಲೈನ್ ತರಗತಿ, ವಿದ್ಯಾಗಮನ ಸೇರಿದಂತೆ ಭೌತಿಕ ತರಗತಿಗಳು ಹಾಗೂ ಮತ್ತಿತರ ಚಟುವಟಿಕೆಗಳ ಮೂಲಕ ಶಿಕ್ಷಣ ನೀಡಲಾಗುತ್ತಿತ್ತು. ಸೋಂಕು ಕಡಿಮೆಯಾಗಿರುವ ಹಿನ್ನಲೆಯಲ್ಲಿ ತರಗತಿಗಳನ್ನು ಪ್ರಾರಂಭಿಸಲಾಗಿದೆ. ಇನ್ನಷ್ಟು ಇಳಿಕೆ ಕಂಡುಬಂದಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಆಸ್ಪದ ನೀಡಲಾಗುವುದು ಎಂದರು.
ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಸೋಮನಾಥ್ ಮಾತನಾಡಿ, 18 ವರ್ಷದೊಳಗಿನವರು ಅಪರಾಧ ಪ್ರಕರಣಗಳನ್ನು ಮಾಡಿದಾಗ ಅವರ ಮೇಲೆ ಕೇಸ್‌ಗಳನ್ನು ದಾಖಲಿಸಿ, ವಿಚಾರಣೆ ನಡೆದು, ಅಪರಾಧಗಳು ಸಾಬೀತಾದಾಗ ಅವರುಗಳ ಮನಃಪರಿವರ್ತನೆ ಮಾಡುವುದರೊಂದಿಗೆ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳು ಸಂವಾದದಲ್ಲಿ ಮಕ್ಕಳು ಶಾಲೆಯಿಂದ ಹೊರಗುಳಿದ, ಭಿಕ್ಷಾಟನೆ, ಮೀನು ಹಿಡಿಯುವ ಕೆಲಸಕ್ಕೆ ಹೋಗುವುದರ ಬಗ್ಗೆ, ಪಠ್ಯೇತರ ಚಟುವಟಿಕೆಗಳನ್ನು ಪ್ರಾರಂಭಿಸುವ ಬಗ್ಗೆ, ರಸ್ತೆಗಳ ಸುರಕ್ಷತಾ ಸಂಚಾರ ವ್ಯವಸ್ಥೆಯ ಬಗ್ಗೆ, ಮಕ್ಕಳ ಮೇಲೆ ಆಗುವ ದೌರ್ಜನ್ಯಗಳ ಕುರಿತು, ಪಠ್ಯದಲ್ಲಿ ನಮ್ಮ ದೇಶದ ಇತಿಹಾಸ ಅಳವಡಿಸುವ ಬಗ್ಗೆ, ತ್ಯಾಜ್ಯ ನಿರ್ವಹಣೆ ಸೇರಿದಂತೆ ಹಲವು ವಿಷಯಗಳ ಕುರಿತು ಪ್ರಶ್ನೆಗಳನ್ನು ಕೇಳಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧನೆ ಹಾಗೂ ಮಕ್ಕಳ ರಕ್ಷಣೆಯ ಕುರಿತ ಭಿತ್ತಿಪತ್ರಗಳ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಆರ್ ಶೇಷಪ್ಪ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ ಎಸ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್. ಎಚ್ ನಾಗೂರು, ಕಾರ್ಮಿಕ ಇಲಾಖೆಯ ಅಧಿಕಾರಿ ಕುಮಾರ್ ಬಿ.ಆರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕುಮಾರ್ ನಾಯ್ಕಿ ಮತ್ತಿತರರು ಉಪಸ್ಥಿತರಿದ್ದರು.








