ಶನಿವಾರಸಂತೆ: 'ಅಂಬೇಡ್ಕರ್ ಜಿಂದಾಬಾದ್' ಘೋಷಣೆಯನ್ನು ತಿರುಚಲಾಗಿದೆ; ಕರ್ನಾಟಕ ಮುಸ್ಲಿಂ ಜಮಾತ್

ಮಡಿಕೇರಿ ನ.15: ಶನಿವಾರಸಂತೆಯಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಮುಸ್ಲಿಂ ಜಮಾತ್ ಸೋಮವಾರಪೇಟೆ ತಾಲೂಕು ಸಮಿತಿ ಅಧ್ಯಕ್ಷ ಪಿ.ಎಂ.ಲತೀಫ್ ಹಾಗೂ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಆಗ್ರಹಿಸಿದ್ದಾರೆ.
ಆರೋಪಿಗಳನ್ನು ಬಂಧಿಸುವoತೆ ಆಗ್ರಹಿಸಿ ಮುಸ್ಲಿಂ ಸಮುದಾಯದ ಮಹಿಳೆಯರು ಠಾಣೆಗೆ ಮುತ್ತಿಗೆ ಹಾಕಿದ ಸಂದರ್ಭ 'ಅಂಬೇಡ್ಕರ್ ಜಿಂದಾಬಾದ್' ಘೋಷಣೆಯನ್ನು ಕೂಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂಬುದಾಗಿ ತಿರುಚಿ ಪ್ರಚಾರಪಡಿಸಿರುವ ವ್ಯಕ್ತಿಯನ್ನು ಸ್ವಯಂಪ್ರೇರಿದ ಪ್ರಕರಣ ದಾಖಲಿಸಿ ಬಂಧಿಸಬೇಕೆoದು ಒತ್ತಾಯಿಸಿದ್ದಾರೆ.
ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಮುಸ್ಲಿಂ ಸಮುದಾಯದ ಯಾವುದೇ ವ್ಯಕ್ತಿ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದರೆ ಕರ್ನಾಟಕ ಮುಸ್ಲಿಂ ಜಮಾಅತ್ ಇದರ ವಿರುದ್ಧ ಕಾನೂನು ಕ್ರಮ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲು ತಯಾರಿದೆ.
ಆದರೆ ಪೊಲೀಸ್ ಅಧಿಕಾರಿಗಳ ಮುಂದೆಯೇ ಸ್ಪಷ್ಟವಾಗಿ 'ಅಂಬೇಡ್ಕರ್ ಜಿಂದಾಬಾದ್' ಎಂಬ ಘೋಷಣೆ ಕೂಗಿದ್ದರು ಪಾಕಿಸ್ತಾನ ಜಿಂದಾಬಾದ್ ಎಂದು ತಿರುಚಿ ಅಂಬೇಡ್ಕರರಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಪ್ರವಾದಿಯವರು ತನ್ನ ತಾಯಿನಾಡನ್ನು ಹೇಗೆ ಪ್ರೀತಿಸಬೇಕೆಂದು ಈ ಹಿಂದೆಯೇ ನಮಗೆ ಕಲಿಸಿಕೊಟ್ಟಿದ್ದಾರೆ. ನಿಜ ಮುಸಲ್ಮಾನ ಪಾಕಿಸ್ತಾನ ಪರ ಘೋಷಣೆ ಕೂಗಲು ಸಾಧ್ಯವೇ ಇಲ್ಲ ಎಂದು ಪಿ.ಎಂ.ಲತೀಫ್ ಹಾಗೂ ಅಬ್ದುಲ್ ರಜಾಕ್ ತಿಳಿಸಿದ್ದಾರೆ.
ಸರ್ವಜನರು ಶಾಂತಿ ಸೌಹಾರ್ದತೆಯಿಂದ ನೆಲೆಸುವಂತಾಗಲು ಪೊಲೀಸರು ಪಾಕಿಸ್ತಾನ ಪರ ಘೋಷಣೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವ ವ್ಯಕ್ತಿಯನ್ನು ಬಂಧಿಸಬೇಕು ಮತ್ತು ಶಾಂತಿ ಕದಡಲು ಪ್ರಯತ್ನಿಸುತ್ತಿರುವ ವ್ಯಕ್ತಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪೊಲೀಸರಿಂದ ತಾರತಮ್ಯ ನೀತಿ: ಎಸ್‍ಡಿಪಿಐ ಆರೋಪ
ಕೊಡಗಿನ ಕೆಲವು ಪೊಲೀಸರು ಮುಸ್ಲಿಮರ ವಿರುದ್ಧ ತಾರತಮ್ಯ ಧೋರಣೆಯನ್ನು ಅನುಸರಿಸುತ್ತಿದ್ದು, ಬಿಜೆಪಿಯ ಅಣತಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಎಸ್‍ಡಿಪಿಐ ರಾಜ್ಯ ಸಮಿತಿ ಪ್ರಮುಖ ಟಿ.ಹೆಚ್.ಅಬೂಬಕ್ಕರ್ ಆರೋಪಿಸಿದ್ದಾರೆ.
ಇತ್ತೀಚಿನ ಹಲವು ಪ್ರಕರಣಗಳನ್ನು ಅಧ್ಯಯನ ಮಾಡಿದಾಗ ಮುಸ್ಲಿಮರು ಆರೋಪಿಗಳಾದರೆ ವಿವಿಧ ಸೆಕ್ಷನ್‍ಗಳಡಿ ದೂರು ದಾಖಲಿಸಲಾಗುತ್ತಿದೆ, ಸಂಘಪರಿವಾರದ ಕಾರ್ಯಕರ್ತರು ಆರೋಪಿಗಳಾದರೆ ಪ್ರಕರಣ ದಾಖಲಿಸಲು ಮೀನ, ಮೇಷ ಎಣಿಸಲಾಗುತ್ತಿದೆ. ಅಲ್ಲದೆ ಸಣ್ಣಪುಟ್ಟ ಸೆಕ್ಷನ್‍ಗಳನ್ನು ಹಾಕಿ ಠಾಣೆಯಲ್ಲೇ ಜಾಮೀನು ನೀಡಲು ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ನಡೆದ ಎಲ್ಲಾ ಪ್ರಕರಣಗಳ ಕುರಿತು ಪೊಲೀಸ್ ಇಲಾಖೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಮತ್ತು ಶಾಂತಿ ಕಾಪಾಡಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನ್ಸೂರ್ ಆಗ್ರಹಿಸಿದರು.







