ರಾಂಚಿ: ಬಿರ್ಸಾ ಮುಂಡಾ ಸ್ಮರಣಾರ್ಥ ಮ್ಯೂಝಿಯಂ ಉದ್ಘಾಟಿಸಿದ ಪ್ರಧಾನಿ

ಹೊಸದಿಲ್ಲಿ,ನ.15: ‘ಧರ್ತಿ ಆಬಾ’ ಎಂದೇ ಖ್ಯಾತರಾಗಿರುವ ಬುಡಕಟ್ಟು ಜನಾಂಗದ ಸ್ವಾತಂತ್ರ ಹೋರಾಟಗಾರ ಬಿರ್ಸಾ ಮುಂಡಾ ಅವರ ಸ್ಮರಣಾರ್ಥ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ನಿರ್ಮಿಸಲಾಗಿರುವ ಮ್ಯೂಝಿಯಂ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜಾರ್ಖಂಡ್ ರಾಜ್ಯ ಸ್ಥಾಪನೆ ದಿನವಾದ ಸೋಮವಾರ ಉದ್ಘಾಟಿಸಿದರು.
ಸಮಾವೇಶವನ್ನುದ್ದೇಶಿಸಿ ವರ್ಚುವಲ್ ಭಾಷಣವನ್ನು ಮಾಡಿದ ಮೋದಿ,ಧರ್ತಿ ಆಬಾ ಸುದೀರ್ಘ ಕಾಲ ಬದುಕಿರಲಿಲ್ಲ,ಆದರೆ ಅವರು ದೇಶಕ್ಕಾಗಿ ಇತಿಹಾಸವೊಂದನ್ನು ಸೃಷ್ಟಿಸಿದ್ದರು ಮತ್ತು ದೇಶದ ಭವಿಷ್ಯದ ಪೀಳಿಗೆಗಳಿಗೆ ಮಾರ್ಗದರ್ಶನವನ್ನು ನೀಡಿದ್ದರು ಎಂದು ಹೇಳಿದರು.
ಬಿರ್ಸಾ ಮುಂಡಾ ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಿ,ಅವರು ಭಾರತದ ಬುಡಕಟ್ಟು ಸಮುದಾಯದ ಅಸ್ಮಿತೆಯನ್ನು ಅಳಿಸಲು ಬಯಸಿದ್ದ ಸಿದ್ಧಾಂತದ ವಿರುದ್ಧ ಹೋರಾಡಿದ್ದರು. ಆಧುನಿಕತೆಯ ಹೆಸರಿನಲ್ಲಿ ವೈವಿಧ್ಯತೆಯ ಮೇಲೆ ದಾಳಿ ನಡೆಸುವುದು,ಪ್ರಾಚೀನ ಅಸ್ಮಿತೆ ಮತ್ತು ಪ್ರಕೃತಿಯನ್ನು ನಾಶ ಮಾಡುವುದು ಸಮಾಜವನ್ನು ಕಲ್ಯಾಣದತ್ತ ಕೊಂಡೊಯ್ಯುವ ಮಾರ್ಗವಲ್ಲ ಎನ್ನುವುದು ಭಗವಾನ್ ಬಿರ್ಸಾರಿಗೆ ತಿಳಿದಿತ್ತು. ಅವರು ಆಧುನಿಕ ಶಿಕ್ಷಣದ ಪರವಾಗಿದ್ದರು ಮತ್ತು ಬದಲಾವಣೆಗಳನ್ನು ಪ್ರತಿಪಾದಿಸಿದ್ದರು. ತನ್ನದೇ ಸಮಾಜದ ಕೊರತೆಗಳ ವಿರುದ್ಧ ಧ್ವನಿಯೆತ್ತುವ ಧೈರ್ಯವನ್ನು ಅವರು ಪ್ರದರ್ಶಿಸಿದ್ದರು ಎಂದರು.
ಜಾರ್ಖಂಡ್ ನ ನಾಗರಿಕರು ಮತ್ತು ಬುಡಕಟ್ಟು ಸಮುದಾಯವನ್ನು ಅಭಿನಂದಿಸಿದ ಮೋದಿ,ಬಿರ್ಸಾ ಮುಂಡಾ ಸ್ಮಾರಕ ಉದ್ಯಾನವನ ಮತ್ತು ಮ್ಯೂಝಿಯಂ ಅನ್ನು ರಾಷ್ಟ್ರಕ್ಕೆ ಅರ್ಪಿಸಿದರು.
ಬಿರ್ಸಾ ಮುಂಡಾ ಅವರು ಕೊನೆಯಿಸಿರೆಳೆದಿದ್ದ ರಾಂಚಿಯ ಹಳೆಯ ಸೆಂಟ್ರಲ್ ಜೈಲಿನಲ್ಲಿ ಮ್ಯೂಜಿಯಂ ಸ್ಥಿತಗೊಂಡಿದ್ದು, ಬಿರ್ಸಾರ 25 ಅಡಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.
ಜಾರ್ಖಂಡ್ ಸರಕಾರದ ಸಹಯೋಗದೊಂದಿಗೆ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ ಎಂದು ಪ್ರಧಾನಿ ಕಚೇರಿಯು ತಿಳಿಸಿದೆ.
ಮ್ಯೂಝಿಯಂ ಬಿರ್ಸಾರ ಜೊತೆ ರಾಜ್ಯದ ಇತರ ಸ್ವಾತಂತ್ರ ಹೋರಾಟಗಾರರನ್ನೂ ಪ್ರಮುಖವಾಗಿ ಬಿಂಬಿಸಿದೆ. ಮ್ಯೂಝಿಯಂ ಪಕ್ಕದ 25 ಎಕರೆ ನಿವೇಶನದಲ್ಲಿ ಸ್ಮಾರಕ ಉದ್ಯಾನವನವನ್ನು ನಿರ್ಮಿಸಲಾಗಿದೆ.







