ವಾಹನ ಚಾಲನಾ ಪರವಾನಿಗೆ ವಿಚಾರ: ಪರೀಕ್ಷೆ ನಡೆಸುವಾಗ ನಿಯಮಗಳನ್ನು ಪಾಲಿಸಿ; ಹೈಕೋರ್ಟ್

ಬೆಂಗಳೂರು, ನ.15: ವಾಹನ ಚಾಲನಾ ಪರವಾನಿಗೆ ನೀಡಲು ಅಗತ್ಯ ಪರೀಕ್ಷೆ ನಡೆಸುವಾಗ `ಮೋಟಾರು ವಾಹನ ಕಾಯ್ದೆ-1989ರ ಸೆಕ್ಷನ್ 15 (2) ಕಟ್ಟುನಿಟ್ಟಾಗಿ ಪಾಲಿಸುವಂತೆ ಚಾಲನಾ ಪರವಾನಿಗೆ ನೀಡುವ ಸಂಸ್ಥೆಗಳಿಗೆ ಹೈಕೋರ್ಟ್ ತಾಕೀತು ಮಾಡಿದೆ.
ಈ ವಿಚಾರವಾಗಿ ಎಸ್. ಗೌರಿಶಂಕರ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರ ಎಸ್.ಗೌರಿಶಂಕರ್ ಖುದ್ದು ವಾದ ಮಂಡಿಸಿ, ವಾಹನ ಚಾಲನಾ ಪರವಾನಿಗೆ ನೀಡುವ ಮೊದಲು ನಡೆಸುವ ಪರೀಕ್ಷೆಗಳಲ್ಲಿ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 15ರ ನಿಯಮಗಳನ್ನು ಪಾಲಿಸಲಾಗುತ್ತಿಲ್ಲ. ವಾಹನ ಚಾಲನೆಯಲ್ಲಿ ಪಕ್ವತೆ ಪಡೆದುಕೊಳ್ಳದವರಿಗೂ ಪರವಾನಿಗೆ ನೀಡಲಾಗುತ್ತಿದೆ. 1 ಕೇಂದ್ರದಲ್ಲಿ 1 ದಿನಕ್ಕೆ 200 ಮಂದಿಗೆ ಪರೀಕ್ಷೆ ನಡೆಸಲಾಗುತ್ತದೆ. ಇದು ಪ್ರಾಯೋಗಿಕವಾಗಿ ಸಾಧುವಲ್ಲ. ಹೀಗಾಗಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ಇದು ಜನರ ಜೀವ ಮತ್ತು ಸುರಕ್ಷತೆಯ ವಿಚಾರವಾಗಿದ್ದು, ನ್ಯಾಯಾಲಯ ಗಂಭೀರವಾಗಿ ಪರಿಗಣಿಸಬೇಕು ಎಂದು ಕೋರಿದರು.
ಸರಕಾರದ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಚಾಲನಾ ಪರವಾನಿಗೆ ನೀಡುವ ಮೊದಲು ನಡೆಸಲಾಗುವ ಪರೀಕ್ಷೆಗಳನ್ನು ನಿಯಮಗಳನ್ನು ಪಾಲಿಸಲಾಗುತ್ತಿದೆ. ಈ ಬಗ್ಗೆ 2021ರ.ಆ.13ರಂದು ಸಂಬಂಧಪಟ್ಟ ಎಲ್ಲರಿಗೆ ಸೂಚನೆಗಳನ್ನು ನೀಡಲಾಗಿದೆ ಎಂದರು. ವಕೀಲರ ವಾದ ಆಲಿಸಿದ ನ್ಯಾಯಪೀಠ, ನಿಯಮಗಳನ್ನು ಪಾಲಿಸಲಾಗುತ್ತಿದೆ ಎಂದು ಸರಕಾರ ಹೇಳಿದೆ. ಅದನ್ನು ನಂಬದೇ ಇರಲು ಸಾಧ್ಯವಿಲ್ಲ. ಆದಾಗ್ಯೂ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 15 (2)ರ ಅನ್ವಯ ನೋಂದಣಿ ಪುಸ್ತಕ ನಿರ್ವಹಿಸುವಂತೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ನಿರ್ದೇಶನ ನೀಡುತ್ತೇವೆ ಎಂದು ಹೇಳಿ ಅರ್ಜಿಯನ್ನು ಇತ್ಯರ್ಥಪಡಿಸಿತು.







