ನಿವೃತ್ತ ನ್ಯಾಯಾಧೀಶರಿಂದ ಸಿಟ್ ತನಿಖೆಯ ಮೇಲ್ವಿಚಾರಣೆಯ ಸುಪ್ರೀಂ ಸೂಚನೆಗೆ ಉ.ಪ್ರ. ಸರಕಾರ ಸಮ್ಮತಿ
ಲಖಿಂಪುರಖೇರಿ ಹಿಂಸಾಚಾರ
ಹೊಸದಿಲ್ಲಿ, ನ. 15: ನಾಲ್ವರು ರೈತರು ಸೇರಿದಂತೆ 8 ಮಂದಿ ಸಾವನ್ನಪ್ಪಿದ ಅಕ್ಟೋಬರ್ 3ರಂದು ನಡೆದ ಲಖಿಂಪುರ ಖೇರಿ ಹಿಂಸಾಚಾರದ ಕುರಿತ ರಾಜ್ಯ ವಿಶೇಷ ತನಿಖಾ ತಂಡ (ಎಸ್ಐಟಿ-ಸಿಟ್) ದ ತನಿಖೆಯನ್ನು ದಿನನಿತ್ಯದ ಆಧಾರದಲ್ಲಿ ಮೇಲ್ವಿಚಾರಣೆ ನಡೆಸಲು ತನ್ನ ಆಯ್ಕೆಯ ಮಾಜಿ ನ್ಯಾಯಮೂರ್ತಿಗಳನ್ನು ನೇಮಕ ಮಾಡಬಹುದು ಎನ್ನುವ ಸುಪ್ರೀಂ ಕೋರ್ಟ್ ನ ಸಲಹೆಗೆ ಉತ್ತರಪ್ರದೇಶ ಸರಕಾರ ಸೋಮವಾರ ಒಪ್ಪಿಕೊಂಡಿದೆ.
ಸಿಟ್ ತನಿಖೆಯಲ್ಲಿ ಕೆಳ ಶ್ರೇಣಿಯ ಪೊಲೀಸ್ ಅಧಿಕಾರಿಗಳು ತೊಡಗಿಕೊಂಡಿರುವ ಬಗ್ಗೆ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠ ಅಸಮಾಧಾನ ವ್ಯಕ್ತಪಡಿಸಿತು. ಅಲ್ಲದೆ, ತನಿಖಾ ತಂಡದಲ್ಲಿ ಸೇರಿಸಲು ಉತ್ತರಪ್ರದೇಶ ಶ್ರೇಣಿಯ ಆದರೆ, ಉತ್ತರಪ್ರದೇಶದಲ್ಲಿ ಜನಿಸದ ಐಪಿಎಸ್ ಅಧಿಕಾರಿಗಳ ಹೆಸರನ್ನು ಸೂಚಿಸುವಂತೆ ಸುಪ್ರೀಂ ಕೋರ್ಟ್ ತಿಳಿಸಿತು.
ಸಂಬಂಧಿತ ನ್ಯಾಯಮೂರ್ತಿಗಳ ಒಪ್ಪಿಗೆ ಪಡೆದುಕೊಳ್ಳಲಿದ್ದೇವೆ ಹಾಗೂ ಪ್ರಕರಣದ ತನಿಖೆಯ ಮೇಲ್ವಿಚಾರಣೆ ನಡೆಸುವ ಮಾಜಿ ಸುಪ್ರೀಂ ಕೋರ್ಟ್ ಹಾಗೂ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ಹೆಸರನ್ನು ಕೂಡ ಪರಿಶೀಲಿಸಲಿದ್ದೇವೆ. ಈ ಬಗ್ಗೆ ಬುಧವಾರ ಘೋಷಣೆ ಮಾಡಲಿದ್ದೇವೆ ಎಂದು ಸೂರ್ಯಕಾಂತ್ ಹಾಗೂ ಹಿಮಾ ಕೊಹ್ಲಿ ಅವರನ್ನು ಕೂಡ ಒಳಗೊಂಡ ಪೀಠ ಹೇಳಿತು.
ತನಿಖೆಯ ಮೇಲ್ವಿಚಾರಣೆ ಗೆ ತನ್ನ ಆಯ್ಕೆಯ ಮಾಜಿ ನ್ಯಾಯಾಧೀಶರನ್ನು ನೇಮಕ ಮಾಡುವ ಸುಪ್ರೀಂ ಕೋರ್ಟ್ ನ ನಿರ್ಧಾರದ ಬಗ್ಗೆ ರಾಜ್ಯ ಸರಕಾರಕ್ಕೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೆ, ಮಾಜಿ ನ್ಯಾಯಾಧೀಶರು ಉತ್ತರಪ್ರದೇಶದವರು ಆಗಿರಬಾರದು ಹಾಗೂ ಅವರಿಗೆ ಪ್ರಕರಣದೊಂದಿಗೆ ಯಾವುದೇ ಸಂಬಂಧ ಇರಬಾರದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಕ್ಕೆ ಒಪ್ಪಿಗೆ ನೀಡಿದ ಹಿರಿಯ ವಕೀಲ ಹರೀಶ್ ಸಾಳ್ವೆ ಹೇಳಿದರು. ಲಖೀಂಪುರಖೇರಿ ಹಿಂಸಾಚಾರದ ಕುರಿತು ನವೆಂಬರ್ 8ರಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು.
ತನಿಖೆ ಸ್ವತಂತ್ರ, ಪಾರದರ್ಶಕ ಹಾಗೂ ನಿಷ್ಪಕ್ಷಪಾತವಾಗಿ ನಡೆಯಲು ದಿನದ ಆಧಾರದಲ್ಲಿ ವಿವಿಧ ಉಚ್ಚ ನ್ಯಾಯಾಲಯಗಳ ನಿವೃತ್ತ ನ್ಯಾಯಾಧೀಶರು ಮೇಲ್ವಿಚಾರಣೆ ನಡೆಸಬೇಕು ಎಂದು ಸಲಹೆ ನೀಡಿತ್ತು. ಪ್ರಕರಣದ ತನಿಖೆ ಮುಂದುವರಿಸಲು ರಾಜ್ಯ ಏಕ ಸದಸ್ಯ ನ್ಯಾಯಾಂಗ ಆಯೋಗವನ್ನು ನಿಯೋಜಿಸಿರುವುದರ ಬಗ್ಗೆ ತನಗೆ ನಂಬಿಕೆ ಇಲ್ಲ ಹಾಗೂ ಅದನ್ನು ತಾನು ಬಯಸಿರಲಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಲಖೀಂಪುರ ಖೇರಿಯಲ್ಲಿ ಸಂಭವಿಸಿದ ಹಿಂಸಾಚಾರದ ಕುರಿತು ರಾಜ್ಯ ಸರಕಾರದಿಂದ ತನಿಖೆ ನಡೆಸಲು ಅಲಹಾಬಾದ್ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಪ್ರದೀಪ್ ಕುಮಾರ್ ಶ್ರೀವಾಸ್ತವ ಅವರನ್ನು ರಾಜ್ಯ ಸರಕಾರ ಹೆಸರಿಸಿತ್ತು.