ಮ್ಯಾನ್ಮಾರ್: ಬಂಧನದಲ್ಲಿದ್ದ ಅಮೆರಿಕನ್ ಪತ್ರಕರ್ತನ ಬಿಡುಗಡೆ, ಶೀಘ್ರ ಗಡೀಪಾರು

photo:twitter/@AFP
ಯಾಂಗಾನ್, ನ.15: ಮೇ ತಿಂಗಳಿನಿಂದ ಮ್ಯಾನ್ಮಾರ್ನಲ್ಲಿ ಬಂಧನದಲ್ಲಿದ್ದ ಅಮೆರಿಕದ ಪತ್ರಕರ್ತ ಡ್ಯಾನಿ ಫೆನ್ಸ್ಟರ್ ಬಂಧಮುಕ್ತಗೊಂಡಿದ್ದು ಅವರನ್ನು ಶೀಘ್ರವೇ ಗಡೀಪಾರು ಮಾಡಲಾಗುವುದು ಎಂದು ಸೇನಾಡಳಿತದ ವಕ್ತಾರರನ್ನು ಉಲ್ಲೇಖಿಸಿ ಎಎಫ್ಪಿ ಸೋಮವಾರ ವರದಿ ಮಾಡಿದೆ.
ಫೆನ್ಸ್ಟರ್ರನ್ನು ರಾಜಧಾನಿ ನೇಪಿಡಾವ್ಗೆ ಕರೆದೊಯ್ದು ಅಲ್ಲಿಂದ ಗಡೀಪಾರು ಮಾಡಲಾಗುತ್ತದೆ ಎಂಬುದನ್ನು ದೃಢಪಡಿಸುತ್ತೇವೆ. ಆದರೆ ಈಗ ಹೆಚ್ಚಿನ ವಿವರ ನೀಡಲಾಗದು ಎಂದು ಸೇನಾಡಳಿತದ ವಕ್ತಾರ ಝಾವ್ ಮಿನ್ಟುನ್ ಹೇಳಿದ್ದಾರೆ.
‘ಫ್ರಾಂಟಿಯರ್ ಮ್ಯಾನ್ಮಾರ್’ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಫೆನ್ಸ್ಟರ್ರನ್ನು ಮೇ ತಿಂಗಳಿನಲ್ಲಿ ಬಂಧಿಸಲಾಗಿದ್ದು ಸೇನೆಯ ವಿರುದ್ಧ ಭಿನ್ನಾಭಿಪ್ರಾಯಕ್ಕೆ ಪ್ರಚೋದನೆ ನೀಡಿದ, ವಲಸೆ ಕಾನೂನು ಉಲ್ಲಂಘಿಸಿ ಮತ್ತು ಅಕ್ರಮ ಗುಂಪು ರಚಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 11 ವರ್ಷದ ಜೈಲುಶಿಕ್ಷೆ ವಿಧಿಸಲಾಗಿತ್ತು.
ಇದರ ಜತೆಗೆ, ಭಯೋತ್ಪಾದನೆ ಮತ್ತು ದೇಶದ್ರೋಹದ ಪ್ರಕರಣವನ್ನೂ ಫೆನ್ಸ್ಟರ್ ವಿರುದ್ಧ ದಾಖಲಿಸಿದ್ದು ಈ ಆರೋಪ ಸಾಬೀತಾದರೆ ಜೀವಾವಧಿ ಶಿಕ್ಷೆಗೆ ಗುರಿಯಾಗಲಿದ್ದರು. ಫೆನ್ಸ್ಟರ್ ಬಿಡುಗಡೆಗೊಂಡಿರುವುದು ಖಚಿತವಾಗಿದೆ. ಆದರೆ ಅವರೊಂದಿಗೆ ಸಂಪರ್ಕ ಸಾಧ್ಯವಾಗದ ಕಾರಣ ಈಗ ಏನನ್ನೂ ಹೇಳಲಾಗದು ಎಂದು ‘ಫ್ರಾಂಟಿಯರ್ ಮ್ಯಾನ್ಮಾರ್’ನ ಪ್ರಕಾಶಕ ಸೋನಿ ಸ್ವೆ ಹೇಳಿದ್ದಾರೆ.