ಚಿಕ್ಕಮಗಳೂರು: ಅಕಾಲಿಕ ಮಳೆಯಿಂದ 4 ಸಾವಿರ ಕೋಟಿಗೂ ಹೆಚ್ಚು ನಷ್ಟ, ಸಮೀಕ್ಷಗೆ ಜಿಲ್ಲಾಡಳಿತ ನಿರ್ಲಕ್ಷ್ಯ; ಆರೋಪ

ಚಿಕ್ಕಮಗಳೂರು, ನ.15: ಅಕಾಲಿಕ ಮಳೆಯಿಂದ ಜಿಲ್ಲೆಯ ಮಲೆನಾಡು ಮತ್ತು ಬಯಲುಸೀಮೆ ಪ್ರದೇಶದಲ್ಲಿ ಅಪಾರ ಪ್ರಮಾಣದ ಬೆಳೆನಷ್ಟವಾಗಿದ್ದು, ವೈಜ್ಞಾನಿಕವಾಗಿ ಬೆಳೆನಷ್ಟ ಸಮೀಕ್ಷೆ ನಡೆಸಿ ಪರಿಹಾರ ನೀಡುವಂತೆ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಡಿ.ಆರ್.ದುಗ್ಗಪ್ಪಗೌಡ ಸರಕಾರಗಳನ್ನು ಆಗ್ರಹಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಮೂಡಿಗೆರೆ, ಚಿಕ್ಕಮಗಳೂರು, ಶೃಂಗೇರಿ, ಕಳಸ, ಕೊಪ್ಪ, ನರಸಿಂಹರಾಜಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಭಾರೀ ಮಳೆಯಿಂದ ಅರೇಬಿಕ ಕಾಫಿಹಣ್ಣು ಕೊಳೆತು ಎಲೆಸಮೇತ ಉದುರುತ್ತಿದ್ದು, ಶೇ.80ರಷ್ಟು ಫಸಲು ನಷ್ಟವಾಗಿದೆ, ತೇವಾಂಶ ಹೆಚ್ಚಳದಿಂದ ಕಾಫಿ ಸೇರಿದಂತೆ ಕಾಳುಮೆಣಸು, ಅಡಿಕೆ ಕೊಳೆರೋಗಕ್ಕೆ ತುತ್ತಾಗಿ ಭಾರೀ ನಷ್ಟ ಉಂಟಾಗಿದೆ. ಇನ್ನೂ ಬಯಲುಸೀಮೆ ಭಾಗದಲ್ಲಿ ರಾಗಿ, ಸಾವೆ ಮೆಕ್ಕೆಜೋಳ, ಈರುಳ್ಳಿ, ಆಲೂಗಡ್ಡೆ, ಅಡಿಗೆ ಬೆಳೆನಾಶವಾಗಿದ್ದು, ಜಿಲ್ಲೆಯಲ್ಲಿ ಅಂದಾಜು 4ಸಾವಿರ ಕೋಟಿ ರೂ.ಗೂ ಹೆಚ್ಚ ನಷ್ಟವಾಗಿದೆ ಎಂದು ತಿಳಿಸಿದರು.
ನಿರಂತರ ಮಳೆಯಿಂದ ಕಾಫಿತೋಟಗಳೆ ನಶಿಸಿ ಹೋಗುವ ಭೀತಿ ಎದುರಾಗಿದ್ದು, ಬೆಳೆಗಾರರು ಮತ್ತು ಅವಲಂಭಿತ ಕಾರ್ಮಿಕರು ಬೀದಿಗೆ ಬೀಳುವ ಸ್ಥಿತಿ ಬಂದಿದೆ. ಈ ನಿಟ್ಟಿನಲ್ಲಿ ಸರ್ಕಾರ ಕಾಫಿ ಉದ್ಯಮ ಮತ್ತು ತೋಟವನ್ನು ಉಳಿಸಬೇಕಿದೆ. ಈ ನಿಟ್ಟಿನಲ್ಲಿ ರೈತರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದ ಅವರು, ಜಿಲ್ಲೆಯಲ್ಲಿ 90ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಕಾಫಿಬೆಳೆ ನಷ್ಟವಾಗಿದೆ. ಹಾಗೇ 40,456 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಅಡಿಕೆ ಬೆಳೆ ನಾಶವಾಗಿದೆ. ಇದರ ಜೊತೆಗೆ ಬೇರುಹುಳ, ಎಲೆಚುಕ್ಕಿರೋಗ, ಬಂದ ಅಲ್ಪಸ್ವಲ್ಪ ಬೆಳೆಯನ್ನು ಕೊಯ್ಲು ಮಾಡಲು ಅಕಾಲಿಕ ಮಳೆ ಬಿಡುತ್ತಿಲ್ಲ 1ಎಕರೆ ಪ್ರದೇಶದಲ್ಲಿ 80 ರಿಂದ 90 ಸಾವಿರ ರೂ. ಖರ್ಚು ಮಾಡಿ ಬೆಳೆದ ಬೆಳೆ ಮಣ್ಣುಪಾಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಇದಕ್ಕೂ ತಮ್ಮಗೂ ಸಂಬಂಧವೇ ಇಲ್ಲದಂತೆ ವರ್ತಿ ಸುತ್ತಿದ್ದಾರೆ. ಇಷ್ಟೇಲ್ಲ ನಷ್ಟವಾದರೂ ಜಿಲ್ಲಾಡಳಿತ ಬೆಳೆನಷ್ಟ ಸಮೀಕ್ಷೆ ಮಾಡಿಲ್ಲ, ಜನ ಪ್ರತಿ ನಿಧಿಗಳು ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತಿಲ್ಲ ಎಂದು ದೂರಿದ ಅವರು, ಕಳೆದ 3ವರ್ಷಗಳಿಂದ ಜಿಲ್ಲೆ ಅತೀವೃಷ್ಟಿಗೆ ಒಳಗಾಗುತ್ತಿದ್ದು, ಮೊದಲ ಭಾರೀ ಸಂಭವಿಸಿದ ಅತೀವೃಷ್ಟಿಯಿಂದ ಬೆಳೆ ಕಳೆದುಕೊಂಡ ರೈತರಿಗೆ ಸಮರ್ಪಕವಾಗಿ ಪರಿಹಾರ ದೊರೆತ್ತಿಲ್ಲ, ಅತೀವೃಷ್ಟಿಗೆ ಬಂದ ಹಣದಲ್ಲಿ ಜನಪ್ರತಿನಿಧಿಗಳು ಕಾಮಗಾರಿಗೆ ಹಣಹಾಕಿ ದುದ್ದು ಹೊಡೆ ಯುವ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ಸಂಭವಿಸಿದ ಅತೀವೃಷ್ಟಿ ಈ ಬಾರೀ ಸಂಭವಿ ಸಿದ ಅತೀವೃಷ್ಟಿ ಬಗ್ಗೆ ಜನಪ್ರತಿನಿಧಿಗಳು ಧ್ವನಿ ಎತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕಾಫಿಮಂಡಳಿ ಅಧಿಕಾರಿಗಳಿಂದ ವೈಜ್ಞಾನಿಕವಾಗಿ ಬೆಳೆನಷ್ಟ ಸಮೀಕ್ಷೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸ ಬೇಕು. ಸರಕಾರ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ರೈತಸಂಘ ಹಸಿರುಸೇನೆ ರಾಜ್ಯ ಉಪಾಧ್ಯಕ್ಷ ಎಂ.ಮಹೇಶ್ ಮಾತನಾಡಿ, ಕೇಂದ್ರ ಸರ್ಕಾರ ಕೃಷಿವಿರೋಧಿ ಮಸೂದೆಗಳನ್ನು ಜಾರಿಗೊಳಿಸುವ ಮೂಲಕ ಈಗಾಗಲೇ ರೈತ ರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ನಾವು ರೈತರ ಪರ ಎಂದು ಹಸಿರುಶಾಲು ಹೊದ್ದು ಕೊಳ್ಳುವ ಜನಪ್ರತಿನಿಧಿಗಳು ರೈತರ ಪರಧ್ವನಿ ಎತ್ತದೆ ಡೋಂಗಿತನ ಪ್ರದರ್ಶಿಸುತ್ತಿದ್ದಾರೆ. ಇಷ್ಟೇಲ್ಲ ಹಾನಿ ಯಾದರೂ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸರ್ಕಾರದ ಗಮನ ಸೆಳೆಯಲು ಮುಂದಾಗದೆ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೃಷಭರಾಜ್, ಕಡೂರು ತಾಲೂಕು ಅಧ್ಯಕ್ಷ ನಿರಂಜನಮೂರ್ತಿ, ಚಿಕ್ಕಮಗಳೂರು ತಾಲೂಕು ಅಧ್ಯಕ್ಷ ತುಳಸೇಗೌಡ, ಮುಖಂಡರಾದ ಓಂಕಾರಪ್ಪ, ಮಂಜೇಗೌಡ, ಬಸವರಾಜ್ ಉಪಸ್ಥಿತರಿದ್ದರು.







