ಚತ್ತೀಸ್ಗಢ: ಗುಂಡಿನ ಚಕಮಕಿ; ನಕ್ಸಲ್ ಕಮಾಂಡರ್ ಸಾವು
ನಾರಾಯಣಪುರ, ನ. 15: ಚತ್ತೀಸ್ಗಢದ ನಾರಾಯಣಪುರ ಜಿಲ್ಲೆಯಲ್ಲಿ ಸೋಮವಾರ ಭದ್ರತಾ ಸಿಬ್ಬಂದಿ ನಡೆಸಿದ ಎನ್ಕೌಂಟರ್ನಲ್ಲಿ ಓರ್ವ ನಕ್ಸಲ್ ಕಮಾಂಡರ್ ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಮೃತಪಟ್ಟ ನಕ್ಸಲೀಯನನ್ನು ಸಾಕೇತ್ ಎಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲಾ ಮೀಸಲು ಗಾರ್ಡ್ (ಡಿಆರ್ಜಿ)ನ ತಂಡ ಚೋಟೆಡೊಂಗರ್ ಪೊಲೀಸ್ ಠಾಣಾ ವ್ಯಾಪ್ತಿಯ ಬಂಖೇರ್ನ ಅರಣ್ಯದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭ ಬೆಳಗ್ಗೆ ಸುಮಾರು 11.30ರ ವೇಳೆ ಭದ್ರತಾ ಸಿಬ್ಬಂದಿ ಹಾಗೂ ನಕ್ಸಲೀಯರ ನಡುವೆ ಗುಂಡಿನ ಚಕಮಕಿ ನಡೆಯಿತು. ಈ ಸಂದರ್ಭ ನಕ್ಸಲ್ ಕಮಾಂಡರ್ ಸಾಕೇತ್ ಮೃತಪಟ್ಟಿದ್ದಾರೆ ಎಂದು ನಾರಾಯಣಪುರದ ಪೊಲೀಸ್ ಅಧೀಕ್ಷಕ ಗಿರಿಜಾ ಶಂಕರ್ ಜೈಸ್ವಾಲ್ ಹೇಳಿದ್ದಾರೆ.
ಗಸ್ತು ತಂಡ ರಾಯಪುರದಿಂದ 300 ಕಿ.ಮೀ. ದೂರದಲ್ಲಿರುವ ಬಂಖೇರ್ ಅರಣ್ಯವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ಆರಂಭಿಸಿತು. ಈ ಸಂದರ್ಭ ಬೆಟ್ಟದ ಮೇಲಿದ್ದ ನಕ್ಸಲೀಯರ ಗುಂಪು ಗುಂಡು ಹಾರಿಸಿತು. ಭದ್ರತಾ ಸಿಬ್ಬಂದಿ ಪ್ರತಿದಾಳಿ ನಡೆಸಿದರು. ಇದರಿಂದ ಗುಂಡಿನ ಚಕಮಕಿ ನಡೆಯಿತು. ಬಳಿಕ ನಕ್ಸಲೀಯರು ಪರಾರಿಯಾದರು ಎಂದು ಅವರು ತಿಳಿಸಿದ್ದಾರೆ. ಎನ್ಕೌಂಟರ್ ನಡೆದ ಸ್ಥಳದಲ್ಲಿ ಶೋಧ ನಡೆಸಿದಾಗ ನಕ್ಸಲ್ ಕಮಾಂಡರ್ ಸಾಕೇತ್ನ ಮೃತದೇಹ ಹಾಗೂ ಎ.ಕೆ. 47 ರೈಫಲ್ ಪತ್ತೆಯಾಗಿದೆ.







