ಟೆನಿಸ್; ಸತತ ಆರನೇ ಜಯ ದಾಖಲಿಸಿದ ಜೊಕೊವಿಕ್

ನೊವಾಕ್ ಜೊಕೊವಿಕ್ (Photo - USA TODAY Sports)
ಟ್ಯುರಿನ್: ಅಗ್ರ ಕ್ರಮಾಂಕದ ಟೆನಿಸ್ ಪಟು ನೊವಾಕ್ ಜೊಕೊವಿಕ್ ಅವರು ಇಲ್ಲಿ ನಡೆದ ಎಟಿಪಿ ಪಂದ್ಯಾವಳಿಯಲ್ಲಿ ಕ್ಯಾಸ್ಪರ್ ರೂಡ್ ವಿರುದ್ಧ 7-6(4), 6-2 ನೇರ ಸೆಟ್ಗಳ ಜಯದೊಂದಿಗೆ ಸತತ ಆರನೇ ಜಯ ದಾಖಲಿಸಿದರು.
ಅಮೆರಿಕನ್ ಓಪನ್ ಟೆನಿಸ್ ಫೈನಲ್ಸ್ನಲ್ಲಿ ಡೇನಿಯಲ್ ಮೆಡ್ವಡೇವ್ ಅವರ ವಿರುದ್ಧ ಸೋಲು ಅನುಭವಿಸಿದ ಬಳಿಕ ಎರಡು ತಿಂಗಳ ವಿಶ್ರಾಂತಿಯ ನಂತರ ಜೊಕೊವಿಕ್ ಈ ಸಾಧನೆ ಮಾಡಿದ್ದಾರೆ. ಯುಎಸ್ ಓಪನ್ ಫೈನಲ್ ಸೋಲಿನೊಂದಿಗೆ ವರ್ಷದ ಎಲ್ಲ ಗ್ರ್ಯಾಂಡ್ ಸ್ಲಾಂಗಳನ್ನು ಗೆಲ್ಲುವ ಜೊಕೊವಿಕ್ ಕನಸು ನುಚ್ಚುನೂರಾಗಿತ್ತು.
ಇದರಿಂದಾಗಿ ಜೊಕೊವಿಕ್, ಅಗ್ರ ಕ್ರಮಾಂಕದ ಎಂಟು ಮಂದಿ ಆಟಗಾರರ ಈ ಟೂರ್ನಿಯಲ್ಲಿ ಸತತ ಆರನೇ ಬಾರಿಗೆ ಪ್ರಶಸ್ತಿ ಗೆದ್ದ ರೋಜರ್ ಫೆಡರರ್ ಅವರ ಸಾಧನೆಯನ್ನು ಸರಿಗಟ್ಟುವ ಪ್ರಯತ್ನದಲ್ಲಿದ್ದಾರೆ. ರೌಂಡ್ರಾಬಿನ್ ಪಂದ್ಯಾವಳಿಯ ಗ್ರೀನ್ಗ್ರೂಪ್ನಲ್ಲಿ ಜೊಕೊವಿಕ್ ಇದೀಗ ಅಗ್ರಸ್ಥಾನದಲ್ಲಿದ್ದಾರೆ. 2018ರ ಚಾಂಪಿಯನ್ ಸ್ಟೆಫಾನ್ಸ್ ಟಿತ್ಸಿಪಾಸ್ ಅವರು ಆಂಡ್ರೆರುಬ್ಲೆವ್ ವಿರುದ್ಧ ಸೆಣೆಸಲಿದ್ದರೆ.
ಮೆಡ್ವಡೇವ್ ಮತ್ತು ಅಲೆಕ್ಸಾಂಡರ್ ಜ್ವೆರೆವ್ ರೆಡ್ಗ್ರೂಪ್ ಪಂದ್ಯದಲ್ಲಿ ರವಿವಾರ ಜಯ ಸಾಧಿಸಿದ್ದು, 12 ವರ್ಷ ಲಂಡನ್ನಲ್ಲಿ ನಡೆದ ಈ ಟೂರ್ನಿ ಈ ಬಾರಿ ಮೊದಲ ಬಾರಿಗೆ ಟ್ಯೂರಿನ್ನಲ್ಲಿ ನಡೆಯುತ್ತಿದೆ.
ಸೋಮವಾರದ ಪಂದ್ಯದ ಬಳಿಕ ಜೊಕೊವಿಕ್ ಅವರಿಗೆ, ಅಗ್ರ ರ್ಯಾಂಕಿಂಗ್ ಆಟಗಾರನಾಗಿ ವರ್ಷವನ್ನು ಪೂರೈಸಿದ್ದಕ್ಕಾಗಿ ಟ್ರೋಫಿ ನೀಡಿ ಗೌರವಿಸಲಾಯಿತು. ಈ ಟ್ರೋಫಿಯೊಂದಿಗೆ ತಮ್ಮ ಬಾಲ್ಯದ ಆದರ್ಶ ಎನಿಸಿದ್ದ ಪೀಟ್ ಸಾಂಪ್ರಾಸ್ ಅವರ ದಾಖಲೆಯನ್ನು ಪುಡಿಗಟ್ಟಿದ ಅವರು ಏಳನೇ ಬಾರಿಗೆ ಈ ಸಾಧನೆ ಮಾಡಿದ ಕೀರ್ತಿಗೆ ಭಾಜನರಾದರು.







