ಅಮೆರಿಕ ವಿವಿಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಪ್ರಮಾಣ ಇಳಿಕೆ : ವರದಿ
ಸಾಂದರ್ಭಿಕ ಚಿತ್ರ (ಫೋಟೊ - PTI)
ಹೊಸದಿಲ್ಲಿ: ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದಾಗಿ ಅಮೆರಿಕದ ವಿಶ್ವವಿದ್ಯಾನಿಲಯಗಳಲ್ಲಿ ವಿದೇಶಿ ವಿದ್ಯಾರ್ಥಿಗಳ ನೋಂದಣಿ ಶೇಕಡ 15ರಷ್ಟು ಕುಸಿದಿದೆ. ಅಂತೆಯೇ ಅಮೆರಿಕ ವಿವಿಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಕೂಡಾ ಶೇಕಡ 13ರಷ್ಟು ಇಳಿಕೆ ಕಂಡಿದೆ.
2019-20ರಲ್ಲಿ ಅಮೆರಿಕದ ವಿವಿಗಳಲ್ಲಿ 10.76 ಲಕ್ಷ ವಿದೇಶಿ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರೆ, 2020-21ರಲ್ಲಿ ಇದು 9.14 ಲಕ್ಷಕ್ಕೆ ಕುಸಿದಿದೆ. ಅಮೆರಿಕದ ಉನ್ನತ ಶಿಕ್ಷಣ ಸಂಸ್ಥೆಗಳು 2020-21ನೇ ಶೈಕ್ಷಣಿಕ ವರ್ಷದಲ್ಲಿ ಒಂಬತ್ತು ವರ್ಷಗಳಲ್ಲೇ ಕನಿಷ್ಠ ಪ್ರಮಾಣದ ವಿದೇಶಿ ವಿದ್ಯಾರ್ಥಿ ದಾಖಲಾತಿಯನ್ನು ಕಂಡಿವೆ. 2015-16ರ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕದ ಕ್ಯಾಂಪಸ್ಗಳಲ್ಲಿ ವಿದೇಶಿ ವಿದ್ಯಾರ್ಥಿಗಳ ಪ್ರಮಾಣ ಶೇಕಡ 5ಕ್ಕಿಂತ ಕೆಳಗೆ ಇಳಿದಿದೆ. ದೇಶದಲ್ಲಿ ಒಟ್ಟು ಇರುವ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ ಏಳು ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿದೆ.
ಭಾರತದಿಂದ 1.68 ಲಕ್ಷ ವಿದ್ಯಾರ್ಥಿಗಳು ಅಮೆರಿಕದ ಸಂಸ್ಥೆಗಳಲ್ಲಿ ನೋಂದಾಯಿಸಿಕೊಂಡಿದ್ದು, ಸೋಮವಾರ ಬಿಡುಗಡೆ ಮಾಡಲಾದ 2021ರ ಓಪನ್ ಡೋರ್ಸ್ ವರದಿಯ ಪ್ರಕಾರ ಅಮೆರಿಕದಲ್ಲಿರುವ ಒಟ್ಟು ವಿದೇಶಿ ವಿದ್ಯಾರ್ಥಿಗಳ ಪೈಕಿ ಭಾರತದ ಪಾಲು ಶೇಕಡ 18.33ರಷ್ಟಗಿದೆ. ಕೋವಿಡ್-19 ಕಾರಣದಿಂದ ಒಟ್ಟು ಸಂಖ್ಯೆಯಲ್ಲಿ ಕುಸಿತ ಉಂಟಾಗಿದೆ.
ವರದಿಯ ಪ್ರಕಾರ ಅಮೆರಿಕದಲ್ಲಿರುವ ಒಟ್ಟು ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ 9.14 ಲಕ್ಷ ಆಗಿದ್ದು, ಇದರಲ್ಲಿ ಐಚ್ಛಿಕ ಪ್ರಾಯೋಗಿಕ ತರಬೇತಿ ಪಡೆಯುತ್ತಿರುವವರೂ ಸೇರಿದ್ದಾರೆ.
2016-17ರಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ ಮೊದಲ ಬಾರಿಗೆ 9 ಲಕ್ಷದ ಗಡಿ ದಾಟಿತ್ತು. ಆ ವರ್ಷ ಅಮೆರಿಕದ ಶಿಕ್ಷಣ ಸಂಸ್ಥೆಗಳಲ್ಲಿ 9.03 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಆ ಬಳಿಕ ಕ್ರಮೇಣ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದ್ದು, ಒಟ್ಟು ವಿದ್ಯಾರ್ಥಿಗಳಲ್ಲಿ ವಿದೇಶಿ ವಿದ್ಯಾರ್ಥಿಗಳು ಶೇಕಡ 5.5ರಷ್ಟಿದ್ದರು. 2020-21ರಲ್ಲಿ ಈ ಸಂಖ್ಯೆ 7.10 ಲಕ್ಷಕ್ಕೆ ಇಳಿದಿದ್ದು, ಇದು 2012-13ರಲ್ಲಿ ದಾಖಲಾದ 7.25 ಲಕ್ಷಕ್ಕಿಂತಲೂ ಕಡಿಮೆ. ಶೇಕಡಾವಾರು ವಿದೇಶಿ ವಿದ್ಯಾರ್ಥಿಗಳ ಪ್ರಮಾಣ 4.6ಕ್ಕೆ ಕುಸಿದಿದ್ದು, ಇದು ಏಳು ವರ್ಷಗಳಲ್ಲೇ ಕನಿಷ್ಠ.