ದೆಹಲಿ ಹೈಕೋರ್ಟ್ಗೆ ಶೀಘ್ರ ಸಲಿಂಗಿ ನ್ಯಾಯಮೂರ್ತಿ
ಸೌರಭ್ ಕೃಪಾಲ್ (Photo - Twitter)
ಹೊಸದಿಲ್ಲಿ : ದೇಶದ ಸಂವಿಧಾನಾತ್ಮಕ ಕೋರ್ಟ್ಗೆ ತಾನು ಸಲಿಂಗಿ ಎಂದು ಘೋಷಿಸಿಕೊಂಡಿರುವ ವ್ಯಕ್ತಿಯೊಬ್ಬರು ನ್ಯಾಯಮೂರ್ತಿಯಾಗುವ ಸಾಧ್ಯತೆ ನಿಚ್ಚಳವಾಗಿದೆ.
ಹಿರಿಯ ವಕೀಲ ಸೌರಭ್ ಕೃಪಾಲ್ ಅವರನ್ನು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸ್ಸು ಮಾಡಿದ್ದು, ಕೃಪಾಲ್ ಅವರ ಪ್ರಸ್ತಾವಿತ ಬಡ್ತಿಗೆ ಕೇಂದ್ರ ಸರ್ಕಾರ ಮಾಡಿದ್ದ ಪ್ರಾಥಮಿಕ ಆಕ್ಷೇಪವನ್ನು ಕೊಲಿಜಿಯಂ ತಳ್ಳಿಹಾಕಿದೆ.
"ನವೆಂಬರ್ 11ರಂದು ನಡೆದ ಸುಪ್ರೀಂಕೋಟ್ ಕೊಲಿಜಿಯಂ ಸಭೆಯಲ್ಲಿ ಸೌರಭ್ ಕೃಪಾಲ್ ಅವರನ್ನು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ನೀಡುವ ಪ್ರಸ್ತಾವವನ್ನು ಅನುಮೋದಿಸಲಾಗಿದೆ" ಎಂಬ ಕೊಲಿಜಿಯಂ ನಿರ್ಣಯವನ್ನು ಸುಪ್ರೀಂಕೋರ್ಟ್ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಕೊಲಿಜಿಯಂ, 49 ವರ್ಷ ವಯಸ್ಸಿನ ಕೃಪಾಲ್ ಅವರನ್ನು ಶಿಫಾರಸ್ಸು ಮಾಡಿದೆ. ಕೃಪಾಲ್ ಅವರು ಐತಿಹಾಸಿಕ ನವತೇಜ್ ಸಿಂಗ್ ಜೊಹಾರ್ ಪ್ರಕರಣದಲ್ಲಿ ಮುಂಚೂಣಿ ವಕೀಲರಾಗಿದ್ದು, 2018ರ ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಸಲಿಂಗಕಾಮವನ್ನು ಅಪರಾಧಮುಕ್ತಗೊಳಿಸಿತ್ತು.
ನ್ಯಾಯಮೂರ್ತಿ ಉದಯ್ ಯು ಲಲಿತ್, ಎ.ಎಂ.ಖನ್ವೀಲ್ಕರ್, ಡಿ.ವೈ.ಚಂದ್ರಚೂಡ್ ಮತ್ತು ಎಲ್.ನಾಗೇಶ್ವರ ರಾವ್ ಅವರು ಕೊಲಿಜಿಯಂನಲ್ಲಿ ಇದ್ದರು.
"ಕೃಪಾಲ್ ಅವರ ಬಡ್ತಿ ಸುಧೀರ್ಘ ಕಾಲದಿಂದ ಬಾಕಿ ಇದೆ. ಸಲಿಂಗಕಾಮವನ್ನು ಅಪರಾಧ ಕೃತ್ಯ ಎಂದು ಪರಿಗಣಿಸುವ ಭಾರತೀಯ ದಂಡಸಂಹಿತೆಯ ಸೆಕ್ಷನ್ 377ನ್ನು ರದ್ದುಡಿಸಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿಗೆ ನಿಜವಾದ ಗೌರವ ಸೋಮವಾರ ಸಿಕ್ಕಿದೆ" ಎಂದು ಮಾಜಿ ಅಟಾರ್ನಿ ಜನರಲ್ ಮತ್ತು ಹಿರಿಯ ವಕೀಲ ಮುಕುಲ್ ರೋಹಟ್ಗಿ ಹೇಳಿದ್ದಾರೆ.
2017ರ ಅಕ್ಟೋಬರ್ನಲ್ಲಿ ದೆಹಲಿ ಹೈಕೋರ್ಟ್ ಕೃಪಾಲ್ ಅವರ ನೇಮಕಕ್ಕೆ ಅವಿರೋಧ ಶಿಫಾರಸ್ಸು ಮಾಡಿತ್ತು. ಆದಾಗ್ಯೂ ಕೃಪಾಲ್ ಅವರ ಹಿನ್ನೆಲೆಯನ್ನು ಪರಿಶೀಲಿಸಲು ಗುಪ್ತಚರ ಬ್ಯೂರೊಗೆ ಸೂಚಿಸಲಾಗಿತ್ತು. ಅದರೆ 2018 ಮತ್ತು 2019ರಲ್ಲಿ ವ್ಯತಿರಿಕ್ತ ವರದಿ ನೀಡಿದ್ದ ಐಬಿ, ಕೃಪಾಲ್ ಅವರ ಸಂಗಾತಿ ವಿದೇಶಿಯರಾಗಿದ್ದು, ಇದು ಭದ್ರತಾ ಅಪಾಯ ಸಾಧ್ಯತೆಗೆ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟಿತ್ತು.