ಏರ್‌ಪೋರ್ಟ್ ಕಸ್ಟಮ್ಸ್ ವಶಪಡಿಸಿಕೊಂಡ 5 ಕೋಟಿ ರೂ. ವಾಚ್ ಬಗ್ಗೆ ಹಾರ್ದಿಕ್ ಪಾಂಡ್ಯ ಸ್ಪಷ್ಟನೆ

ಮುಂಬೈ: ದುಬೈನಿಂದ ಹಿಂದಿರುಗುವಾಗ ಮುಂಬೈ ವಿಮಾನ ನಿಲ್ದಾಣದಲ್ಲಿ 5 ಕೋಟಿ ರೂ. ಮೌಲ್ಯದ ಎರಡು ಕೈಗಡಿಯಾರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ವರದಿಗಳನ್ನು ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮಂಗಳವಾರ ತಳ್ಳಿಹಾಕಿದ್ದಾರೆ. 1.5 ಕೋಟಿ ರೂ. ಮೌಲ್ಯದ ಒಂದು ವಾಚ್ ಅನ್ನು ಮಾತ್ರ 'ಸರಿಯಾದ ಮೌಲ್ಯಮಾಪನ' ಕ್ಕಾಗಿ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಪಾಂಡ್ಯ ಅವರ ಬಳಿ ಎರಡು ವಾಚ್ ಗಳ ಬಿಲ್ ಇಲ್ಲ ಎಂಬ ಕಾರಣಕ್ಕೆ ಕಸ್ಟಮ್ಸ್ ಇಲಾಖೆ ರವಿವಾರ ರಾತ್ರಿ ವಾಚ್ ಗಳನ್ನು ವಶಪಡಿಸಿಕೊಂಡಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ಮಂಗಳವಾರ ವರದಿ ಮಾಡಿದೆ.
ಈ ವರದಿಯನ್ನು ನಿರಾಕರಿಸಿದ ಪಾಂಡ್ಯ ಅವರು ಟ್ವಿಟರ್‌ನಲ್ಲಿ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾರೆ. "ನಾನು ತಂದ ವಸ್ತುಗಳನ್ನು ಘೋಷಿಸಲು ಹಾಗೂ ಅಗತ್ಯವಿರುವ ಕಸ್ಟಮ್ಸ್ ಸುಂಕವನ್ನು ಪಾವತಿಸಲು ಸ್ವಯಂಪ್ರೇರಣೆಯಿಂದ ಮುಂಬೈ ವಿಮಾನ ನಿಲ್ದಾಣದ ಕಸ್ಟಮ್ಸ್ ಕೌಂಟರ್‌ಗೆ ಹೋಗಿದ್ದೇನೆ. ನಾನು ಕಸ್ಟಮ್ಸ್‌ಗೆ ಘೋಷಿಸಿದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಗ್ರಹಿಕೆಗಳು ಹರಿದಾಡುತ್ತಿವೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಏನಾಯಿತು ಎಂಬುದರ ಕುರಿತು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ"ಎಂದರು
ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತ ತನ್ನ ಅಭಿಯಾನವನ್ನು ಮುಗಿಸಿದ ನಂತರ ಹಾರ್ದಿಕ್ ಪಾಂಡ್ಯ ದುಬೈನಿಂದ ಹಿಂತಿರುಗಿದ್ದಾರೆ.







