ಗುಜರಾತ್: ನಿವೃತ್ತಿಯ ಬಳಿಕ ಮತ್ತೊಬ್ಬ ಮಾಜಿ ಐಪಿಎಸ್ ಅಧಿಕಾರಿ ಬಿಜೆಪಿ ಸೇರಲು ಸಜ್ಜು

photo: ANI
ಅಹಮದಾಬಾದ್: ಗುಜರಾತ್ ಕೇಡರ್ನ ನಿವೃತ್ತ ಐಪಿಎಸ್ ಅಧಿಕಾರಿ ಹರಿಕೃಷ್ಣ ಪಟೇಲ್ ಬಿಜೆಪಿ ಸೇರಲು ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ.
ಅಮ್ರೇಲಿ ಜಿಲ್ಲೆಯವರಾದ ಪಟೇಲ್ ಅವರನ್ನು ಗುಜರಾತ್ ಬಿಜೆಪಿ ಅಧ್ಯಕ್ಷ ಸಿಆರ್ ಪಾಟೀಲ್ ರವಿವಾರ ಅಮ್ರೇಲಿಯಲ್ಲಿ ನಡೆದ ಪಕ್ಷದ ಕಾರ್ಯಕ್ರಮವೊಂದರಲ್ಲಿ ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಅದೇ ಸಮಯದಲ್ಲಿ ಮಾಜಿ ಪೊಲೀಸ್ ಅಧಿಕಾರಿ ಶೀಘ್ರದಲ್ಲೇ ಪಕ್ಷಕ್ಕೆ ಔಪಚಾರಿಕವಾಗಿ ಸೇರ್ಪಡೆಗೊಳಿಸಲಾಗುವುದು ಎಂಬ ಸುಳಿವು ನೀಡಿದರು.
1999ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ಪಟೇಲ್ ಈ ವರ್ಷದ ಜೂನ್ನಲ್ಲಿ ಪೊಲೀಸ್ ಮಹಾನಿರೀಕ್ಷಕರಾಗಿ (ವಡೋದರಾ ರೇಂಜ್) ನಿವೃತ್ತರಾಗಿದ್ದರು.
'ಇಂಡಿಯನ್ ಎಕ್ಸ್ಪ್ರೆಸ್' ಜೊತೆ ಮಾತನಾಡಿದ ಪಟೇಲ್, ನಾನು ಬಿಜೆಪಿ ಸೇರುವುದು ಖಚಿತ. ಸದಸ್ಯತ್ವ ಪ್ರಕ್ರಿಯೆಯ ಔಪಚಾರಿಕತೆಗಳು ಇನ್ನೂ ಪೂರ್ಣಗೊಂಡಿಲ್ಲ. ತಾತ್ವಿಕವಾಗಿ, ನಾನು ಪಕ್ಷಕ್ಕೆ ಸೇರುತ್ತೇನೆ ಹಾಗೂ ಪಕ್ಷವು ನನ್ನನ್ನು ಸೇರಿಸಿಕೊಳ್ಳಲಿದೆ. ತಮ್ಮ ಪೂರ್ವಜರು ಸಾರ್ವಜನಿಕ ಜೀವನದಲ್ಲಿದ್ದರು ಮತ್ತು ತನ್ನ ತಂದೆ ಕೂಡ ಬಿಜೆಪಿಯಲ್ಲಿದ್ದರು. ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ನನ್ನ ಸಮಯವನ್ನು ಕಳೆಯಲು ನಾನು ಬಿಜೆಪಿ ಸೇರಲು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದರು.
2012 ರಲ್ಲಿ' ಸುರೇಂದ್ರ-ನಗರ ಜಿಲ್ಲೆಯ ತಂಗಢ್ ಪಟ್ಟಣದಲ್ಲಿ ಪೊಲೀಸ್ ಗುಂಡಿನ ದಾಳಿಯಲ್ಲಿ ಇಬ್ಬರು ದಲಿತರ ಹತ್ಯೆಯಲ್ಲಿ ಪಟೇಲ್ ಹೆಸರು ಕೇಳಿಬಂದಿತು. ಜಾಮ್ನಗರ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಪಟೇಲ್ ರನ್ನು ತಂಗಢ್ನಲ್ಲಿ ಗುಂಪನ್ನು ನಿಯಂತ್ರಿಸಲು ಕಳುಹಿಸಲಾಯಿತು. ಪಟೇಲರ ಆಜ್ಞೆಯಂತೆ AK-47 ಅಸಾಲ್ಟ್ ರೈಫಲ್ನಿಂದ ದಲಿತರ ಗುಂಪಿನ ಮೇಲೆ ಗುಂಡು ಹಾರಿಸಲಾಯಿತು ಎಂದು ಆರೋಪಿಸಲಾಗಿತ್ತು.