ಶ್ರೀನಗರ: ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಇಬ್ಬರು ಉದ್ಯಮಿ ಸೇರಿದಂತೆ ನಾಲ್ವರು ಮೃತ್ಯು

ಶ್ರೀನಗರ: ಶ್ರೀನಗರದಲ್ಲಿ ಭದ್ರತಾ ಪಡೆಗಳು ನಡೆಸಿದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಇಬ್ಬರು ಉದ್ಯಮಿಗಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ.
ಕಾರ್ಯಾಚರಣೆಯಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ ಹಾಗೂ ಕೊಲ್ಲಲ್ಪಟ್ಟ ಉದ್ಯಮಿಗಳು "ಭಯೋತ್ಪಾದಕ ಬೆಂಬಲಿಗರು" ಎಂದು ಪೊಲೀಸರು ತಿಳಿಸಿದ್ದಾರೆ.
ಎನ್ ಕೌಂಟರ್ ನಲ್ಲಿ ಹತ್ಯೆಗೈಯ್ಯಲ್ಪಟ್ಟ ಉದ್ಯಮಿಗಳಾದ ಡಾ. ಮುದಾಸಿರ್ ಗುಲ್ ಹಾಗೂ ಅಲ್ತಾಫ್ ಭಟ್ ಅವರು ಹೈದರ್‌ಪೋರಾದ ವಾಣಿಜ್ಯ ಸಂಕೀರ್ಣದಲ್ಲಿ ಅಂಗಡಿಗಳನ್ನು ಹೊಂದಿದ್ದರು.
ದಂತ ಶಸ್ತ್ರಚಿಕಿತ್ಸಕರಾದ ಮುದಾಸಿರ್ ಗುಲ್ ಅವರು ಸಂಕೀರ್ಣದಲ್ಲಿ ಕಂಪ್ಯೂಟರ್ ಕೇಂದ್ರವನ್ನು ನಡೆಸುತ್ತಿದ್ದರು. ಅಲ್ತಾಫ್ ಭಟ್ ವಾಣಿಜ್ಯ ಸಂಕೀರ್ಣದ ಮಾಲೀಕರಾಗಿದ್ದು, ಹಾರ್ಡ್‌ವೇರ್ ಮತ್ತು ಸಿಮೆಂಟ್ ಅಂಗಡಿಯನ್ನು ಕೂಡ ನಡೆಸುತ್ತಿದ್ದರು.
ಜಮ್ಮು -ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹತ್ಯೆಗಳ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
"ಮುಗ್ಧ ನಾಗರಿಕರನ್ನು ಮಾನವ ಗುರಾಣಿಗಳಾಗಿ ಬಳಸುವುದು, ಅವರನ್ನು ಕ್ರಾಸ್ ಫೈರಿಂಗ್‌ನಲ್ಲಿ ಕೊಲ್ಲುವುದು ಕೇಂದ್ರ ಸರಕಾರದ ರೂಲ್‌ಬುಕ್‌ನ ಭಾಗವಾಗಿದೆ.ಸತ್ಯ ಹೊರತರಲು ನ್ಯಾಯಾಂಗ ತನಿಖೆ ನಡೆಯಬೇಕು " ಎಂದು ಮುಫ್ತಿ ಟ್ವೀಟ್ ಮಾಡಿದ್ದಾರೆ.







