ಶಬ್ದ ಮಾಲಿನ್ಯ ಸೃಷ್ಟಿಸುವ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಹೈಕೋರ್ಟ್ ನಿರ್ದೇಶನ

ಬೆಂಗಳೂರು, ನ.16: ಮಾರ್ಪಡಿಸಿದ ಸೈಲೆನ್ಸರ್ ಮತ್ತು ಹಾರ್ನ್‍ಗಳಿಂದ ಶಬ್ದ ಮಾಲಿನ್ಯ ಉಂಟು ಮಾಡುತ್ತಿರುವ ದ್ವಿಚಕ್ರ ವಾಹನಗಳು, ನಾಲ್ಕು ಚಕ್ರದ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.
ರಾಜ್ಯದಲ್ಲಿ ಶಬ್ದ ಮಾಲಿನ್ಯ ನಿಯಂತ್ರಣ ಕಾಯ್ದೆಯನ್ನು ಸಮರ್ಥವಾಗಿ ಜಾರಿಗೊಳಿಸಲು ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಗಿರೀಶ್ ಭಾರದ್ವಾಜ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಗೂ ನಗರದ ಥಣಿಸಂದ್ರ ಸುತ್ತಮುತ್ತಲಿನ ಮಸೀದಿಗಳಿಂದ ಶಬ್ದ ಮಾಲಿನ್ಯ ಉಂಟಾಗುತ್ತಿರುವುದನ್ನು ಆಕ್ಷೇಪಿಸಿ ಸ್ಥಳೀಯ ನಿವಾಸಿಗಳು ಸಲ್ಲಿಸಿರುವ ಪಿಐಎಲ್ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಮ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಶ್ರೀಧರ್ ಪ್ರಭು ವಾದ ಮಂಡಿಸಿ, ದಿನದಿಂದ ದಿನಕ್ಕೆ ಶಬ್ದ ಮಾಲಿನ್ಯ ಹೆಚ್ಚುತ್ತಿದೆ. ಇದರಿಂದಾಗಿ ಜನರಲ್ಲಿ ಕಿವುಡುತನ, ನಿದ್ರಾಹೀನತೆ, ಒತ್ತಡ ಸೇರಿದಂತೆ ಮಾನಸಿಕ ಮತ್ತು ದೈಹಿಕ ಆರೋಗ್ಯ ಹಾಳಾಗುತ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಸಂಬಂಧಿತ ಯಾವ ಪ್ರಾಧಿಕಾರಗಳೂ ಶಬ್ದ ಮಾಲಿನ್ಯಕ್ಕೆ ಕಾರಣವಾಗುತ್ತಿರುವವರ ಮೇಲೆ ಕಾನೂನು ಕ್ರಮ ಜರುಗಿಸುತ್ತಿಲ್ಲ. ವಕ್ಫ್ ಮಂಡಳಿ ತನಗೆ ಅಧಿಕಾರ ಇಲ್ಲದಿದ್ದರೂ ಕಡಿಮೆ ಡೆಸಿಬಲ್ ದ್ವನಿವರ್ಧಕಗಳನ್ನು ಬಳಸುವಂತೆ ಮಸೀದಿಗಳಿಗೆ ಸುತ್ತೋಲೆ ಹೊರಡಿಸಿದೆ. ಇದು ಸರಿಯಾದ ಕ್ರಮವಲ್ಲ. ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳ ಪ್ರಕಾರ ರಾತ್ರಿ 10 ರಿಂದ ಬೆಳಗ್ಗೆ 6ರವರೆಗೆ ದ್ವನಿವರ್ಧಕ ಬಳಸುವಂತಿಲ್ಲ. ಅದೇ ರೀತಿ ಸಾರ್ವಜನಿಕ ಹಬ್ಬಗಳು ಸೇರಿದಂತೆ ವಿಶೇಷ ಸಂದರ್ಭದಲ್ಲಿಯೂ ವರ್ಷಕ್ಕೆ 15 ದಿನಗಳಿಗಿಂತ ಹೆಚ್ಚಿನ ಸಮಯ ದ್ವನಿವರ್ಧಕ ಬಳಕೆಗೆ ಅವಕಾಶವಿಲ್ಲ. ಆದರೆ, ರಾಜ್ಯದಲ್ಲಿ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದರು.
ವಾದ ಆಲಿಸಿದ ಪೀಠ, ಮಾರ್ಪಾಡಿತ ಸೈಲೆನ್ಸರ್, ಹಾರ್ನ್ ಹೊಂದಿರುವ ವಾಹನಗಳಿಂದರೂ ಶಬ್ದ ಮಾಲಿನ್ಯ ಹೆಚ್ಚಾಗುತ್ತಿದೆ. ಈ ವಾಹನಗಳ ವಿರುದ್ಧ ಕೈಗೊಂಡಿರುವ ಕ್ರಮಗಳೇನು. ಯಾವುದೇ ಮುಖ್ಯ ರಸ್ತೆ ಬಳಿ ಹೋದರೂ ಶಬ್ದ ಮಾಲಿನ್ಯ ಮಿತಿ ಮೀರಿರುವುದು ತಿಳಿಯುತ್ತದೆ. ಪರಿಸ್ಥಿತಿ ನೋಡಿದರೆ ಸರಕಾರ ಯಾವುದೇ ಕ್ರಮ ಕೈಗೊಂಡಂತೆ ಕಾಣುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.
ಬಳಿಕ, ಶಬ್ದ ಮಾಲಿನ್ಯ ಉಂಟುಮಾಡುತ್ತಿರುವ ವಾಹನಗಳ ವಿರುದ್ಧ ಸಂಬಂಧಿತ ಪ್ರಾಧಿಕಾರಗಳು ಕಾರ್ಯಾಚರಣೆ ನಡೆಸಬೇಕು. ಅಂತಹ ವಾಹನಗಳನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಈ ಕುರಿತ ವರದಿಯನ್ನು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿತು. ಅಲ್ಲದೇ, ಮಸೀದಿಗಳು ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ವಕ್ಫ್ ಬೋರ್ಡ್ ಸೂಚನೆಯಂತೆ ಧ್ವನಿವರ್ಧಕ ಬಳಸುತ್ತಿರುವುದಾಗಿ ತಿಳಿಸಿವೆ. ಹೀಗಾಗಿ, ವಕ್ಫ್ ಯಾವ ಕಾನೂನಿನ ಅಡಿ ಇಂತಹ ಸುತ್ತೋಲೆ ಹೊರಡಿಸಿದೆ ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಸೂಚಿಸಿ, ವಿಚಾರಣೆ ಮುಂದೂಡಿತು.
ಮಸೀದಿಗಳಿಂದ ಶಬ್ದ ಮಾಲಿನ್ಯ: ಆದೇಶ ಪಾಲಿಸದ್ದಕ್ಕೆ ಅಸಮಾಧಾನ
‘ಮಸೀದಿಗಳು ಪ್ರಮಾಣ ಪತ್ರದಲ್ಲಿ ವಕ್ಫ್ ಬೋರ್ಡ್ ಸೂಚನೆಯಂತೆ ಧ್ವನಿವರ್ಧಕ ಬಳಸುತ್ತಿದ್ದೇವೆ ಎಂದು ತಿಳಿಸಿದೆ. ಆದರೆ, ವಕ್ಫ್ ಬೋರ್ಡ್‍ಗೆ ಧ್ವನಿವರ್ಧಕ ಬಳಸಲು ಅನುಮತಿ ನೀಡುವ ಅಧಿಕಾರವಿಲ್ಲ. ಹೀಗಾಗಿ, ಯಾವ ಕಾನೂನಿನ ಅಡಿ ಇಂತಹ ಸುತ್ತೋಲೆ ಹೊರಡಿಸಿದೆ ಎಂಬ ಬಗ್ಗೆ ವಕ್ಫ್ ಮಂಡಳಿ ಸ್ಪಷ್ಟನೆ ನೀಡಬೇಕು.’
-ರಿತುರಾಜ್ ಅವಸ್ಥಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ







