ಕನಿಷ್ಠ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಪ್ರಾರಂಭ: ಉಡುಪಿ ಡಿಸಿ ಕೂರ್ಮಾರಾವ್

ಉಡುಪಿ, ನ.16: ರಾಜ್ಯ ಸರಕಾರದ ಆದೇಶದಂತೆ ಕೇಂದ್ರ ಸರಕಾರ 2021-22ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಸೂಚಿಸಿರುವ ಮಾರ್ಗಸೂಚಿಯನುಸಾರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ಭತ್ತವನ್ನು ನೀಡಲು ಇಚ್ಛಿಸುವ ಜಿಲ್ಲೆಯ ರೈತರಿಂದ ಭತ್ತವನ್ನು ಖರೀದಿಸಲು ನೋಂದಣಿ ಕಾರ್ಯವನ್ನು ಕೂಡಲೇ ಪ್ರಾರಂಭಿಸಿ ಭತ್ತ ಸಂಗ್ರಹಣಾ ಎಜೆನ್ಸಿಯಾಗಿ ಕರ್ನಾಟಕ ಆಹಾರ ಮತ್ತು ನಾಗರೀಕ ನಿಗಮ ನಿಯಮಿತ ಇವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2021-22ನೇ ಸಾಲಿನ ಮುಂಗಾರು ಋತುವಿನಲ್ಲಿ ಎಫ್‌ಎಕ್ಯೂ ಗುಣಮಟ್ಟದ ಸಾಮಾನ್ಯ ಭತ್ತವನ್ನು ಕ್ವಿಂಟಾಲ್ ಒಂದಕ್ಕೆ 1,940 ರೂ. ದರದಲ್ಲಿ ಹಾಗೂ ಗ್ರೇಡ್ ಎ ಭತ್ತವನ್ನು ಕ್ವಿಂಟಾಲ್‌ಗೆ 1960ರೂ. ದರದಲ್ಲಿ ಖರೀದಿಸಲು ಅವಕಾಶವಿದೆ. (ಕೆಂಪು ತಳಿ ಭತ್ತ ಹೊರತು ಪಡಿಸಿ). ರೈತರಿಂದ ಖರೀದಿಸ ಲಾಗುವ ಆಹಾರ ಧಾನ್ಯಗಳಿಗೆ ಸಂಬಂಧಿಸಿದಂತೆ ಕೃಷಿ ಇಲಾಖೆಯಿಂದ ಜಾರಿ ಗೊಳಿಸಿರುವ ಫ್ರೂಟ್ಸ್ ದತ್ತಾಂಶದಿಂದ ರೈತರ ಮಾಹಿತಿಯನ್ನು ನೇರವಾಗಿ ಪಡೆದು ಕೃಷಿ ಇಲಾಖೆ ಒದಗಿಸಿರುವ ಸರಾಸರಿ ಬೆಳೆ ಮಾಹಿತಿಯಂತೆ ಹಾಗೂ ಕೇಂದ್ರ ಸರಕಾರ ನಿಗದಿಪಡಿಸಿರುವ ಮಾರ್ಗಸೂಚಿಗಳಂತೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತವನ್ನು ನೀಡಲು ಇಚ್ಛಿಸುವ ರೈತರ ನೊಂದಣಿ ಪ್ರಕ್ರಿಯೆಯನ್ನು ಸಂಗ್ರಹಣಾ ಏಜೆನ್ಸಿ ಕೂಡಲೇ ಉಡುಪಿ, ಕಾರ್ಕಳ ಮತ್ತು ಕುಂದಾಪುರ ತಾಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ರೈತರ ನೋಂದಣಿ ಕೇಂದ್ರ ತೆರೆಯಲು ಸೂಚಿಸಲಾಗಿದೆ.
ಸ್ಥಳೀಯ ಕೆಂಪು ಭತ್ತವನ್ನು ಬೆಂಬಲ ಬೆಲೆ ಯೋಜನೆಯ ಮಾರ್ಗಸೂಚಿಗೆ ಸೇರ್ಪಡೆಗೊಳಿಸಿ ಖರೀದಿಸುವ ಬಗ್ಗೆ ಸರಕಾರದಿಂದ ನಿರ್ದೇಶನ ಬಂದ ನಂತರ ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







