ಎಂಆರ್ಪಿಎಲ್ ವ್ಯವಸ್ಥಾಪಕ ನಿರ್ದೇಶಕರ ಹೆಸರಿನಲ್ಲಿ ನಕಲಿ ಇ-ಮೇಲ್ ಸೃಷ್ಟಿಸಿ ವಂಚನೆಗೆ ಯತ್ನ: ದೂರು
![ಎಂಆರ್ಪಿಎಲ್ ವ್ಯವಸ್ಥಾಪಕ ನಿರ್ದೇಶಕರ ಹೆಸರಿನಲ್ಲಿ ನಕಲಿ ಇ-ಮೇಲ್ ಸೃಷ್ಟಿಸಿ ವಂಚನೆಗೆ ಯತ್ನ: ದೂರು ಎಂಆರ್ಪಿಎಲ್ ವ್ಯವಸ್ಥಾಪಕ ನಿರ್ದೇಶಕರ ಹೆಸರಿನಲ್ಲಿ ನಕಲಿ ಇ-ಮೇಲ್ ಸೃಷ್ಟಿಸಿ ವಂಚನೆಗೆ ಯತ್ನ: ದೂರು](https://www.varthabharati.in/sites/default/files/images/articles/2021/11/16/314061-1637081400.jpg)
ಮಂಗಳೂರು, ನ.16: ಎಂಆರ್ಪಿಎಲ್ ವ್ಯವಸ್ಥಾಪಕ ನಿರ್ದೇಶಕರ ಹೆಸರಿನಲ್ಲಿ ನಕಲಿ ಇ-ಮೇಲ್ ಸೃಷ್ಟಿಸಿ ಸಿಬ್ಬಂದಿಗೆ ಸಂದೇಶ ಕಳುಹಿಸಿದ ಬಗ್ಗೆ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಂಆರ್ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ವೆಂಕಟೇಶ್ರ ಹೆಸರಿನಲ್ಲಿ ನ.13ರಂದು ಸಂಜೆ 4ರಿಂದ 5ಗಂಟೆಯ ಅವಧಿಯಲ್ಲಿ ಅಪರಿಚಿತ ವ್ಯಕ್ತಿಗಳು ನಕಲಿ ಇಮೇಲ್ ಐಡಿ ರಚಿಸಿದ್ದಾರೆ. ಬಳಿಕ ನಕಲಿ ಇಮೇಲ್ ಐಡಿಯಿಂದ ಕಂಪೆನಿಯ ಕೆಲವು ಸಿಬ್ಬಂದಿಗೆ ಸಂದೇಶ ಕಳುಹಿಸಿದ್ದು, ಅದರಲ್ಲಿ ಸಿಬ್ಬಂದಿ ವಾಟ್ಸ್ಆ್ಯಪ್ ಸಂಖ್ಯೆಗಳ್ನು ಕಳುಹಿಸುವಂತೆ ತಿಳಿಸಿರುತ್ತಾರೆ. ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರ ಐಡಿ ಎಂದು ನಂಬಿದ ಕೆಲವು ಸಿಬ್ಬಂದಿ ವಾಟ್ಸ್ಆ್ಯಪ್ ನಂಬರ್ ಕಳುಹಿಸಿದ್ದಾರೆ. ಇದರಿಂದ ಸಿಬ್ಬಂದಿಯೊಬ್ಬರಿಗೆ ಅನುಮಾನ ಬಂದು ವ್ಯವಸ್ಥಾಪಕ ನಿರ್ದೇಶಕರಲ್ಲಿ ಕೇಳಿದಾಗ ಅದು ನಕಲಿ ಇಮೇಲ್ ಎಂದು ಗೊತ್ತಾಗಿದೆ.
ನಕಲಿ ಇಮೇಲ್ ರಚಿಸುವಾಗ ವ್ಯವಸ್ಥಾಪಕ ನಿರ್ದೇಶಕರ ಫೋಟೊ ಕೂಡಾ ಬಳಸಲಾಗಿದೆ. ಅಪರಿಚಿತ ವ್ಯಕ್ತಿಗಳು ನಕಲಿ ಇಮೇಲ್ ಐಡಿ ರಚಿಸಿ ವಂಚನೆ ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಿರುವ ಸಾಧ್ಯತೆಯಿದೆ ಎಂದು ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.