ಧ್ವಜಸ್ತಂಭ ನಿಲ್ಲಿಸುವ ವೇಳೆ ವಿದ್ಯಾರ್ಥಿ ಸಾವು ಪ್ರಕರಣ: ಡಿಸಿ ವಿಚಾರಣಾ ವರದಿ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು, ನ.16: ಸ್ವಾತಂತ್ರ್ಯ ದಿನಾಚರಣೆ ವೇಳೆ ತುಮಕೂರಿನ ಕರೀಕೆರೆ ಗ್ರಾಮದಲ್ಲಿ ಧ್ವಜಸ್ತಂಭ ಅಳವಡಿಸುವಾಗ ವಿದ್ಯುತ್ ಅವಘಡದಲ್ಲಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ನಡೆಸಿರುವ ವಿಚಾರಣೆಯ ವರದಿ ಸಲ್ಲಿಸಲು ಹೈಕೋರ್ಟ್, ಸರಕಾರಕ್ಕೆ ಎರಡು ವಾರ ಕಾಲಾವಕಾಶ ನೀಡಿದೆ.
ಘಟನೆಯಲ್ಲಿ ಮೃತಪಟ್ಟ ವಿದ್ಯಾರ್ಥಿ ಚಂದನ್ ಪಾಲಕರಿಗೆ ಈಗಾಗಲೇ ನೀಡಿರುವ 1 ಲಕ್ಷ ರೂಪಾಯಿ ಪರಿಹಾರ ಹೆಚ್ಚಳ ಮಾಡುವ ಕುರಿತು ಕಳೆದ ಸೆ.6ರಂದು ನ್ಯಾಯಾಲಯ ನೀಡಿದ್ದ ಆದೇಶದ ಅನುಪಾಲನಾ ವರದಿ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ನ್ಯಾಯಪೀಠ ನಿರ್ದೇಶಿಸಿದೆ.
ಕೊಪ್ಪಳ ನಗರದ ಬನ್ನಿಕಟ್ಟಿ ಬಳಿಯ ಬಿಸಿಎಂ ಹಾಸ್ಟೆಲ್‍ನಲ್ಲಿ 2019ರ ಆ.15ರಂದು ಧ್ಜಜಸ್ತಂಭ ತೆರವುಗೊಳಿಸುವ ವೇಳೆ ವಿದ್ಯುತ್ ತಂತಿ ತಗುಲಿ ಐವರು ವಿದ್ಯಾರ್ಥಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ಕರೀಕೆರೆ ಸರಕಾರಿ ಶಾಲೆಯಲ್ಲಿ ಸಂಭವಿಸಿದ ಅವಘಡದಲ್ಲಿ ಸಾವಿಗೀಡಾದ ವಿದ್ಯಾರ್ಥಿ ಚಂದನ್ ಪಾಲಕರಿಗೆ ಪರಿಹಾರ ಪಾವತಿಸಲಾಗಿದೆಯೇ ಎಂಬ ಪೀಠದ ಪ್ರಶ್ನೆಗೆ ಮೃತ ವಿದ್ಯಾರ್ಥಿಯ ಪಾಲಕರಿಗೆ 1 ಲಕ್ಷ ರೂಪಾಯಿ ಪರಿಹಾರ ಪಾವತಿಸಲಾಗಿದೆ ಎಂದು ಸರಕಾರಿ ವಕೀಲರು ಉತ್ತರಿಸಿದರು.
ಕೊಪ್ಪಳದಲ್ಲಿ ಘಟನೆ ನಡೆದಾಗ ಪ್ರತಿ ವಿದ್ಯಾರ್ಥಿಯ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಪಾವತಿಸಲಾಗಿದೆ. ತುಮಕೂರಿನ ಕರೀಕೆರೆ ಪ್ರಕರಣದಲ್ಲೂ ಅದೇ ರೀತಿ ಪರಿಹಾರ ಪಾವತಿಸಬೇಕು. ಗಾಯಗೊಂಡಿರುವ ಶಶಾಂಕ್ ಹಾಗೂ ಪವನ್‍ಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಒದಗಿಸಬೇಕು. ಘಟನೆ ಕುರಿತು ಜಿಲ್ಲಾಧಿಕಾರಿಯಿಂದ ವಿಚಾರಣೆ ನಡೆಸಿ, ಕ್ರಮ ಕೈಗೊಳ್ಳಬೇಕು ಎಂದು ಈ ಹಿಂದೆ ಹೈಕೋರ್ಟ್ ಆದೇಶಿಸಿದೆ.
ಈ ಆದೇಶ ಪಾಲನೆ ಮಾಡಲಾಗಿದೆಯೇ ಎಂದು ಪ್ರಶ್ನಿಸಿತು. ಸರಕಾರದ ಪರ ವಕೀಲರು, ಜಿಲ್ಲಾಧಿಕಾರಿ ವಿಚಾರಣೆ ಪೂರ್ಣಗೊಂಡಿದ್ದು, ಎರಡು ವಾರ ಕಾಲಾವಕಾಶ ನೀಡಿದರೆ ಸಮಗ್ರ ವರದಿ ಸಲ್ಲಿಸಲಾಗುವುದು ಎಂದರು.
ಇದನ್ನು ಪರಿಗಣಿಸಿದ ಪೀಠವು ಘಟನೆ ಕುರಿತು ಜಿಲ್ಲಾಧಿಕಾರಿ ನಡೆಸಿರುವ ವಿಚಾರಣೆಯ ವರದಿ ಹಾಗೂ ಕೈಗೊಂಡ ಕ್ರಮಗಳ ವರದಿಯ ಜತೆಗೆ ಮೃತ ವಿದ್ಯಾರ್ಥಿಯ ಪಾಲಕರಿಗೆ ಪರಿಹಾರ ಮೊತ್ತ ಹೆಚ್ಚಳ ಮಾಡಿದ ಬಗ್ಗೆ ಮತ್ತು ಗಾಯಗೊಂಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಚಿಕಿತ್ಸೆ ಒದಗಿಸಿರುವ ಕುರಿತ ಮಾಹಿತಿ ಒಳಗೊಂಡ ಸಮಗ್ರ ವರದಿಯನ್ನು ಎರಡು ವಾರಗಳ ಒಳಗೆ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು







