ಮಹಾತ್ಮ ಗಾಂಧೀಜಿಯವರ ಅಹಿಂಸಾ ಮಂತ್ರವನ್ನೇ ಲೇವಡಿ ಮಾಡಿದ ಕಂಗನಾ
'ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸಿದರೆ ಸಿಗುವುದು ಸ್ವಾತಂತ್ರ್ಯವಲ್ಲ, ಭಿಕ್ಷೆ'

ಮುಂಬೈ: ಭಾರತಕ್ಕೆ 1947ರಲ್ಲಿ ಬ್ರಿಟಿಷರಿಂದ ಸಿಕ್ಕಿರುವುದು ಸ್ವಾತಂತ್ರ್ಯವಲ್ಲ, ಅದು ಭಿಕ್ಷೆ ಎಂದು ಇತ್ತೀಚೆಗೆ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ಇದೀಗ ಮಹಾತ್ಮ ಗಾಂಧೀಜಿಯವರ ಅಹಿಂಸಾ ಮಂತ್ರವನ್ನೇ ಲೇವಡಿ ಮಾಡಿದ್ದಾರೆ. ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸು ಎಂಬ ಗಾಂಧೀಜಿಯವರ ಮಂತ್ರವನ್ನು ಅನುಸರಿಸಿದರೆ ನಿಮಗೆ ಸ್ವಾತಂತ್ರ್ಯ ಸಿಗುವುದಿಲ್ಲ. ಭಿಕ್ಷೆ ಮಾತ್ರ ಸಿಗುತ್ತದೆ ಎಂದು ಅವರು ವ್ಯಂಗ್ಯವಾಡಿದರು.
ಸುಭಾಷ್ ಚಂದ್ರ ಬೋಸ್ ಹಾಗೂ ಭಗತ್ ಸಿಂಗ್ ಅವರಿಗೆ ಮಹಾತ್ಮಾ ಗಾಂಧಿಯವರಿಂದ ಯಾವುದೇ ಬೆಂಬಲ ಸಿಗಲಿಲ್ಲ ಎಂದಿರುವ ರಣಾವತ್ ನಿಮ್ಮ ನಾಯಕರನ್ನು ಬುದ್ಧಿವಂತಿಕೆಯಿಂದ ಆರಿಸಿಕೊಳ್ಳಿ ಎಂದು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿದ್ದಾರೆ.
ನೇತಾಜಿಯನ್ನು ಹಸ್ತಾಂತರಿಸಲು ಗಾಂಧಿ ಹಾಗೂ ಇತರರ ಸಮ್ಮತಿ ಎಂಬ ಶೀರ್ಷಿಕೆಯ ಹಳೆಯ ಪತ್ರಿಕೆಯೊಂದರ ವರದಿಯ ತುಣುಕನ್ನು ಇನ್ ಸ್ಟಾಗ್ರಾಮ್ ನಲ್ಲಿ ಮಂಗಳವಾರ ಕಂಗನಾ ಹಂಚಿಕೊಂಡಿದ್ದಾರೆ. ಜವಾಹರಲಾಲ್ ನೆಹರು ಹಾಗೂ ಮುಹಮ್ಮದ್ ಅಲಿ ಜಿನ್ನಾ ಅವರೊಂದಿಗೆ ಗಾಂಧಿಯವರು ಬ್ರಿಟಿಷ್ ನ್ಯಾಯಾಧೀಶರೊಂದಿಗೆ ಒಪ್ಪಂದಕ್ಕೆ ಬಂದಿದ್ದಾರೆ. ಬೋಸ್ ಒಂದು ವೇಳೆ ಭಾರತ ಪ್ರವೇಶಿಸಿದರೆ ಅವರನ್ನು ಹಸ್ತಾಂತರಿಸಲು ಅವರು ಒಪ್ಪಿದ್ದಾರೆ ಎಂದು ಆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ನೀವು ಗಾಂಧಿ ಹಾಗೂ ನೇತಾಜಿಯನ್ನು ಒಟ್ಟಿಗೆ ಇಷ್ಟಪಡಲು ಸಾಧ್ಯವಿಲ್ಲ. ನಿರ್ಧರಿಸಿ ಆಯ್ಕೆ ಮಾಡಿಕೊಳ್ಳಿ. ವಿರೋಧಿಗಳನ್ನು ವಿರೋಧಿಸಲಾಗದ, ಹೋರಾಡುವ ಬಿಸಿ ರಕ್ತವಿಲ್ಲದವರು, ಆದರೆ ಅಧಿಕಾರ ದಾಹಿಗಳಾಗಿದ್ದ ಕುತಂತ್ರಿಗಳು ಸ್ವಾತಂತ್ತ್ಯಕ್ಕಾಗಿ ಹೋರಾಡಿದವರನ್ನು ತಮ್ಮ ಯಜಮಾನರಿಗೆ ಹಸ್ತಾಂತರಿಸಿದರು ಎಂದು ಅವರು ಪೋಸ್ಟ್ ನಲ್ಲಿ ಬರೆದಿದ್ದಾರೆ.
ಭಗತ್ ಸಿಂಗ್ ಅವರನ್ನು ಗಲ್ಲಿಗೇರಿಸಬೇಕೆಂದು ಗಾಂಧೀಜಿ ಬಯಸಿದ್ದನ್ನು ಸೂಚಿಸುವ ಪುರಾವೆಗಳಿವೆ ಎಂದು ಕಂಗನಾ ಹೇಳಿದ್ದಾರೆ.







