ದಿಲ್ಲಿಯಲ್ಲಿ ಮಾಲಿನ್ಯ ತಡೆಗೆ ಕಸರತ್ತು: ಥರ್ಮಲ್ ಪ್ಲಾಂಟ್ ಬಂದ್, ಲಾರಿ ಪ್ರವೇಶ ನಿಷೇಧ

ಸಾಂದರ್ಭಿಕ ಚಿತ್ರ (source: PTI)
ಹೊಸದಿಲ್ಲಿ, ನ.17: ರಾಷ್ಟ್ರ ರಾಜಧಾನಿಯಲ್ಲಿ ವಾಯು ತುರ್ತು ಸ್ಥಿತಿ ಹಿನ್ನೆಲೆಯಲ್ಲಿ ದಿಲ್ಲಿ ಸುತ್ತಮುತ್ತಲ ಪ್ರದೇಶಗಳಲ್ಲಿ ಉಷ್ಣ ವಿದ್ಯುತ್ ಘಟಕಗಳನ್ನು ಮುಚ್ಚುವುದು ಮತ್ತು ವಾಹನಗಳನ್ನು ರಾಜಧಾನಿಯ ಪ್ರವೇಶದ್ವಾರದ ಹೊರಗಡೆಯೇ ತಡೆಯುವುದು ಸೇರಿದಂತೆ ಹಲವು ನಿಯಂತ್ರಣ ಕ್ರಮಗಳನ್ನು ವಾಯು ಗುಣಮಟ್ಟ ನಿರ್ವಹಣೆ ಆಯೋಗ ಸೂಚಿಸಿದೆ.
ದಿಲ್ಲಿಯಿಂದ 300 ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಐದು ಉಷ್ಣ ವಿದ್ಯುತ್ ಘಟಕಗಳನ್ನು ಹೊರತುಪಡಿಸಿ ಉಳಿದೆಲ್ಲ ಘಟಕಗಳನ್ನು ಈ ತಿಂಗಳ ಕೊನೆಯವರೆಗೆ ಮುಚ್ಚುವಂತೆ ಆದೇಶಿಸಲಾಗಿದೆ. ಜತೆಗೆ ಅಗತ್ಯ ವಸ್ತುಗಳು ಸಾಗಣೆ ಲಾರಿಗಳನ್ನು ಹೊರತುಪಡಿಸಿ ಉಳಿದ ಟ್ರಕ್ಗಳು ರಾಜಧಾನಿ ಪ್ರವೇಶಿಸುವುದನ್ನೂ ನಿಷೇಧಿಸಲಾಗಿದೆ. 10ರಿಂದ 15 ವರ್ಷ ಹಳೆಯ ಡೀಸೆಲ್ ಹಾಗೂ ಪೆಟ್ರೋಲ್ ವಾಹನಗಳನ್ನು ರಸ್ತೆಗೆ ಇಳಿಸದಂತೆ ಸೂಚಿಸಲಾಗಿದ್ದು, ಕೆಲ ಸರಕಾರಿ ಹಾಗೂ ಮೂಲಸೌಕರ್ಯ ಯೋಜನೆಗಳನ್ನು ಹೊರತುಪಡಿಸಿ ಎಲ್ಲ ನಿರ್ಮಾಣ ಮತ್ತು ಧ್ವಂಸ ಚಟುವಟಿಕೆಗಳನ್ನು ನವೆಂಬರ್ 21ರವರೆಗೆ ನಿಷೇಧಿಸಲಾಗಿದೆ.
ಎನ್ಸಿಆರ್ ಪ್ರದೇಶದ ಎಲ್ಲ ಶಿಕ್ಷಣ ಸಂಸ್ಥೆಗಳು ಮುಚ್ಚಿದ್ದು, ಕೇವಲ ಆನ್ಲೈನ್ ತರಗತಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಶೇ.50ರಷ್ಟು ಸರಕಾರಿ ಸಿಬ್ಬಂದಿ ಮನೆಯಿಂದಲೇ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿದ್ದು, ಖಾಸಗಿ ಸಂಸ್ಥೆಗಳು ಕೂಡಾ ಇದನ್ನು ಅನುಸರಿಸುವಂತೆ ಸಲಹೆ ಮಾಡಲಾಗಿದೆ.
ತುರ್ತು ಸೇವೆಗಳನ್ನು ಹೊರತುಪಡಿಸಿ ಇಡೀ ಎನ್ಸಿಆರ್ ಪ್ರದೇಶಗಳಲ್ಲಿ ಡೀಸೆಲ್ ಜನರೇಟರ್ ಸೆಟ್ಗಳನ್ನು ನಿಷೇಧಿಸಲಾಗಿದ್ದು, ಅನಿಲ ಸಂಪರ್ಕ ಹೊಂದಿರುವ ಎಲ್ಲ ಕೈಗಾರಿಕೆಗಳು ಅನಿಲವನ್ನೇ ಕಡ್ಡಾಯವಾಗಿ ಬಳಸುವಂತೆ ಆದೇಶಿಸಲಾಗಿದೆ. ತಪ್ಪಿದಲ್ಲಿ ಅಂಥ ಕೈಗಾರಿಕೆಗಳನ್ನು ಮುಚ್ಚಲಾಗುವುದು ಎಂದು ಎಚ್ಚರಿಸಿದೆ.