ಬಾಲಕಿ ಅಪ್ರಾಪ್ತಳಲ್ಲ, ಮೃತ ಯುವಕನ ವಿರುದ್ಧದ ಅಪಹರಣ ಆರೋಪ ಕೈಬಿಡಲಾಗುವುದು: ಪೊಲೀಸರು
ಕಾಸ್ ಗಂಜ್ ಕಸ್ಟಡಿ ಸಾವು ಪ್ರಕರಣ

ಸಾಂದರ್ಭಿಕ ಚಿತ್ರ
ಲಕ್ನೊ: ಈ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ಯುವಕನ ವಿರುದ್ಧದ ಅಪಹರಣ ಆರೋಪವನ್ನು ಕೈಬಿಡಲಾಗುವುದು ಎಂದು ಪೊಲೀಸರನ್ನು ಉಲ್ಲೇಖಿಸಿ ‘theprint.in’ ಮಂಗಳವಾರ ವರದಿ ಮಾಡಿದೆ.
22 ವರ್ಷದ ಅಲ್ತಾಫ್ ಎಂಬಾತ ಅಪಹರಿಸಿದ್ದ ಎಂದು ಆರೋಪಿಸಲಾಗಿರುವ ಬಾಲಕಿ ಕಳೆದ ವಾರ ಪತ್ತೆಯಾಗಿದ್ದು, ಆಕೆ ಅಪ್ರಾಪ್ತಳಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 19 ವರ್ಷದ ಯುವತಿ ಸೋಮವಾರ ಮ್ಯಾಜಿಸ್ಟ್ರೇಟ್ ಮುಂದೆ ತನ್ನ ಹೇಳಿಕೆಯನ್ನು ದಾಖಲಿಸಿದ್ದಾಳೆ. ಅಲ್ತಾಫ್ ತನ್ನನ್ನು ಮದುವೆಯಾಗುವುದಾಗಿ ವಾಗ್ದಾನ ಮಾಡಿದ್ದ ಎಂದು ಹೇಳಿದ್ದಾಳೆ ಎಂದು ವರದಿಯಾಗಿದೆ.
ಅಲ್ತಾಫ್ ತನ್ನ ಸ್ನೇಹಿತನೊಂದಿಗೆ ಆಗ್ರಾಕ್ಕೆ ಹೋಗುವಂತೆ ಯುವತಿಯನ್ನು ಕೇಳಿದ್ದನೆಂದು ವರದಿಯಾಗಿದೆ. ಅವನು ನಂತರ ಅವರೊಂದಿಗೆ ಸೇರಿಕೊಳ್ಳುವುದಾಗಿ ಹೇಳಿದ್ದ.
ಮಹಿಳೆಯ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ನವೆಂಬರ್ 9 ರಂದು ಅಲ್ತಾಫ್ ನನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ವಿಚಾರಣೆಯ ಸಮಯದಲ್ಲಿ ಅಲ್ತಾಫ್ ಶೌಚಾಲಯಕ್ಕೆ ಹೋಗಲು ಅನುಮತಿ ಕೇಳಿದ್ದ. ನಂತರ ಶೌಚಾಲಯದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಅಲ್ತಾಫ್ ನನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬದವರು ಆರೋಪಿಸಿದ್ದು, ಆತನ ಸಾವಿನ ಕುರಿತು ಕೇಂದ್ರ ತನಿಖಾ ದಳ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
'The Indian Express' ಪ್ರಕಾರ, ಅಲ್ತಾಫ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 363 (ಅಪಹರಣ) ಹಾಗೂ 366 (ಅಪಹರಣ ಅಥವಾ ಮಹಿಳೆಯನ್ನು ಮದುವೆಗೆ ಒತ್ತಾಯಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.