ಟಿವಿ ಚರ್ಚೆಗಳು ಹೆಚ್ಚು ಮಾಲಿನ್ಯ ಸೃಷ್ಟಿಸುತ್ತಿವೆ: ಸಿಜೆಐ ರಮಣ ಅಸಮಾಧಾನ

ಸಿಜೆಐ ರಮಣ (PTI)
ಹೊಸದಿಲ್ಲಿ,ನ.17: ನ್ಯಾಯಾಲಯಗಳಲ್ಲಿಯ ಹೇಳಿಕೆಗಳನ್ನು ಸಂದರ್ಭಕ್ಕೆ ಹೊರತಾಗಿ ಉಲ್ಲೇಖಿಸುವ ಮೂಲಕ ಸುದ್ದಿವಾಹಿನಿಗಳಲ್ಲಿಯ ಚರ್ಚೆಗಳು ಎಲ್ಲರಿಗಿಂತ ಹೆಚ್ಚಿನ ವಾಯುಮಾಲಿನ್ಯವನ್ನುಂಟು ಮಾಡುತ್ತಿವೆ ಎಂದು ಸರ್ವೋಚ್ಚ ನ್ಯಾಯಾಲಯವು ಬುಧವಾರ ಹೇಳಿತು.
ಪ್ರತಿಯೊಬ್ಬರೂ ತಮ್ಮದೇ ಆದ ಅಜೆಂಡಾ ಹೊಂದಿದ್ದಾರೆ ಮತ್ತು ಈ ಚರ್ಚೆಗಳಲ್ಲಿ ಹೇಳಿಕೆಗಳನ್ನು ಸಂದರ್ಭಕ್ಕೆ ಹೊರತಾಗಿ ಪ್ರಸ್ತಾಪಿಸಲಾಗುತ್ತಿದೆ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಹಾಗೂ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ ಮತ್ತು ಸೂರ್ಯಕಾಂತ ಅವರ ಪೀಠವು,‘ನೀವು ಕೆಲವು ವಿಷಯಗಳನ್ನು ಬಳಸಿಕೊಳ್ಳಲು ಬಯಸುತ್ತೀರಿ,ನಾವದನ್ನು ಗಮನಿಸುವಂತೆ ಮಾಡುತ್ತೀರಿ ಮತ್ತು ಅದನ್ನು ವಿವಾದಾತ್ಮಕವಾಗಿ ಮಾಡುತ್ತೀರಿ. ಆಗ ದೂಷಣೆ ಮತ್ತು ಪ್ರತಿದೂಷಣೆಗಳು ಮಾತ್ರ ಉಳಿದುಕೊಳ್ಳುತ್ತವೆ ’ ಎಂದು ಹೇಳಿತು.
‘ಸುದ್ದಿವಾಹಿನಿಗಳಲ್ಲಿಯ ಚರ್ಚೆಗಳು ಎಲ್ಲರಿಗಿಂತ ಹೆಚ್ಚಿನ ವಾಯಮಾಲಿನ್ಯವನ್ನುಂಟು ಮಾಡುತ್ತಿವೆ. ಅವುಗಳಿಗೆ ಏನಾಗುತ್ತಿದೆ ಮತ್ತು ಸಮಸ್ಯೆಯೇನು ಎನ್ನುವುದು ಅರ್ಥವಾಗುವುದಿಲ್ಲ. ಸಂದರ್ಭಕ್ಕೆ ಹೊರತಾಗಿ ಹೇಳಿಕೆಗಳನ್ನು ಬಳಸಲಾಗುತ್ತಿದೆ. ಇದಕ್ಕೆ ನಾವೇನೂ ಮಾಡುವಂತಿಲ್ಲ ಮತ್ತು ನಾವು ನಿಯಂತ್ರಿಸಲೂ ಸಾಧ್ಯವಿಲ್ಲ. ನಾವು ಪರಿಹಾರವನ್ನು ಕಂಡುಕೊಳ್ಳಲು ಗಮನವನ್ನು ಕೇಂದ್ರೀಕರಿಸುತ್ತಿದ್ದೇವೆ ’ಎಂದು ದಿಲ್ಲಿ ಮತ್ತು ಸುತ್ತುಮುತ್ತಲಿನ ಪ್ರದೇಶಗಳಲ್ಲಿಯ ವಾಯುಮಾಲಿನ್ಯಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದ್ದ ಸರ್ವೋಚ್ಚ ನ್ಯಾಯಾಲಯವು ಹೇಳಿತು.
ಕೃಷಿ ತ್ಯಾಜ್ಯ ಸುಡುವಿಕೆಯು ವಾಯುಮಾಲಿನ್ಯಕ್ಕೆ ಕೊಡುಗೆಗಳಲ್ಲೊಂದಾಗಿದೆ ಮತ್ತು ಈ ಸಮಸ್ಯೆಯನ್ನು ಬಗೆಹರಿಸುವ ಅಗತ್ಯವಿದೆ ಎಂದು ನಿವೇದಿಸಿದ ದಿಲ್ಲಿ ಸರಕಾರದ ಪರ ಹಿರಿಯ ವಕೀಲ ಅಭಿಷೇಕ ಮನು ಸಿಂಘ್ವಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರದ ಅಂಕಿಅಂಶಗಳನ್ನು ಪ್ರಸ್ತಾಪಿಸಿದಾಗ ಪ್ರತಿಕ್ರಿಯೆಯಾಗಿ ಪೀಠವು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತು.
ಸುದ್ದಿವಾಹಿನಿಗಳಲ್ಲಿ ತನ್ನ ವಿರುದ್ಧ ಕೆಲವು ಬೇಜವಾಬ್ದಾರಿಯ ಮತ್ತು ಅಸಹ್ಯ ಹೇಳಿಕೆಗಳನ್ನು ಗಮನಿಸಿದ್ದೇನೆ ಎಂದು ಪೀಠಕ್ಕೆ ತಿಳಿಸಿದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು, ವಾಯುಮಾಲಿನ್ಯಕ್ಕೆ ಕೃಷಿತ್ಯಾಜ್ಯಗಳ ಸುಡುವಿಕೆಯ ಕೊಡುಗೆಯು ಕೇವಲ ಶೇ.4ರಿಂದ ಶೇ.7ರಷ್ಟಿದೆ ಎಂದು ತೋರಿಸುವ ಮೂಲಕ ತಾನು ಸರ್ವೋಚ್ಚ ನ್ಯಾಯಾಲಯವನ್ನು ದಾರಿ ತಪ್ಪಿಸಿದ್ದೇನೆ ಎಂದು ಅವು ಹೇಳಿವೆ. ಈ ಬಗ್ಗೆ ಸ್ಪಷ್ಟನೆ ನೀಡಲು ಬಯಸಿದ್ದೇನೆ ಎಂದು ಹೇಳಿದರು.
‘ನಾವು ಎಳ್ಳಷ್ಟೂ ದಾರಿ ತಪ್ಪಿಲ್ಲ.ನೀವು ಶೇ.10 ಎಂದು ಹೇಳಿದ್ದೀರಿ,ಆದರೆ ಅಫಿಡವಿಟ್ನಲ್ಲಿ ಶೇ.30ರಿಂದ ಶೇ.40ರಷ್ಟು ಎಂದು ಬೆಟ್ಟು ಮಾಡಲಾಗಿದೆ ’ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು,‘ನಾವು ಸರಕಾರಿ ಹುದ್ದೆಗಳಲ್ಲಿರುವಾಗ ಇಂತಹ ಟೀಕೆಗಳು ನಡೆಯುತ್ತಲೇ ಇರುತ್ತವೆ. ನಾವು ಸ್ಪಷ್ಟವಾಗಿದ್ದೇವೆ,ನಮ್ಮ ಆತ್ಮಸಾಕ್ಷಿಯು ಸ್ಪಷ್ಟವಾಗಿದೆ. ಇವನ್ನೆಲ್ಲ ಮರೆತುಬಿಡಿ. ನಾವು ಸಮಾಜದ ಒಳ್ಳೆಯದಕ್ಕಾಗಿ ಕೆಲಸ ಮಾಡುತ್ತಿದ್ದೇವೆ ’ಎಂದು ಹೇಳಿತು.