ಜಾಗತಿಕ ಲಂಚಗುಳಿತನ ಅಪಾಯ ಇರುವ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 82ನೇ ಸ್ಥಾನ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ಬಿಸಿನೆಸ್ ಬ್ರೈಬರಿ ರಿಸ್ಕ್ ಅಥವಾ ಉದ್ಯಮ ಸಂಬಂಧಿತ ಲಂಚದ ಅಪಾಯ ಎದುರಿಸುತ್ತಿರುವ ಜಗತ್ತಿನ ದೇಶಗಳ ಪೈಕಿ ಭಾರತ ಕಳೆದ ವರ್ಷದ 77ನೇ ಸ್ಥಾನದಿಂದ ಇನ್ನೂ ಐದು ಸ್ಥಾನಗಳಷ್ಟು ಕುಸಿದು ಈ ವರ್ಷ 82ನೇ ಸ್ಥಾನದಲ್ಲಿದೆ. ಲಂಚ ವಿರೋಧಿ ಸಂಘಟನೆ ಟಿಆರ್ಎಸಿಇ (ಟ್ರೇಸ್) ಪ್ರತಿ ವರ್ಷ 194 ದೇಶಗಳಲ್ಲಿ ಭ್ರಷ್ಟಾಚಾರ ಸಂಬಂಧಿ ಅಂಕಿಅಂಶಗಳನ್ನು ಒಟ್ಟುಗೂಡಿಸುತ್ತದೆ.
ಈ ವರ್ಷದ ಅಂಕಿಅಂಶ ಪ್ರಕಾರ ಉತ್ತರ ಕೊರಿಯಾ, ತುರ್ಕೆಮೆನಿಸ್ತಾನ್, ವೆನೆಜುವೆಲಾ ಮತ್ತು ಎರಿಟ್ರಿಯಾ ಗರಿಷ್ಠ ವಾಣಿಜ್ಯ ಸಂಬಂಧಿ ಲಂಚಗುಳಿತನದ ದೇಶಗಳಾಗಿದ್ದರೆ, ಈ ಪಟ್ಟಿಯಲ್ಲಿ ಡೆನ್ಮಾರ್ಕ್, ನಾರ್ವೇ, ಫಿನ್ಲ್ಯಾಂಡ್, ಸ್ವೀಡನ್ ಮತ್ತು ನ್ಯೂಜಿಲೆಂಡ್ ಕನಿಷ್ಠ ಲಂಚಗುಳಿತನದ ದೇಶಗಳೆಂದು ಪರಿಗಣಿತವಾಗಿವೆ.
ಕಳೆದ ವರ್ಷ ಭಾರತ 77ನೇ ಸ್ಥಾನದಲ್ಲಿದ್ದು 45 ಅಂಕಗಳನ್ನು ಪಡೆದಿದ್ದರೆ ಈ ಬಾರಿ 82ನೇ ಸ್ಥಾನದಲ್ಲಿದೆ ಹಾಗೂ 44 ಅಂಕಗಳನ್ನು ಪಡೆದಿದೆ.
ಸರಕಾರಗಳೊಂದಿಗೆ ಉದ್ಯಮ ಸಂಬಂಧಿ ಸಂವಹನಗಳು, ಲಂಚ ವಿರೋಧಿ ನೀತಿ, ಸರಕಾರಿ ಮತ್ತು ನಾಗರಿಕ ಸೇವೆಗಳಲ್ಲಿ ಪಾರದರ್ಶಕತೆ ಮತ್ತು ಮಾಧ್ಯಮ ಸೇರಿದಂತೆ ನಾಗರಿಕ ಸಮಾಜ ಈ ಸಮಸ್ಯೆಯನ್ನು ತಡೆಗಟ್ಟಲು ನಡೆಸುತ್ತಿರುವ ಯತ್ನಗಳನ್ನು ಮಾನದಂಡಗಳನ್ನಾಗಿರಿಸಿ ಈ ರ್ಯಾಂಕಿಂಗ್ ನೀಡಲಾಗುತ್ತದೆ.