ದೇಶದಲ್ಲಿ ಸರಕಾರಿ ಶಾಲೆಗಳಿಗೆ ದಾಖಲಾತಿ ಪ್ರಮಾಣದಲ್ಲಿ ಶೇ 5ರಷ್ಟು ಏರಿಕೆ: ಎಎಸ್ಇಆರ್ ವರದಿ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಕಳೆದೊಂದು ವರ್ಷದ ಅವಧಿಯಲ್ಲಿ ದೇಶದಲ್ಲಿ ಸರಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಶೇ 65.8ರಿಂದ ಶೇ 70.3ಕ್ಕೆ ಏರಿಕೆಯಾಗಿದೆ ಎಂದು ವಾರ್ಷಿಕ ಶಿಕ್ಷಣ ಸ್ಥಿತಿಗತಿ ವರದಿ (ಆನ್ಯುವಲ್ ಸ್ಟೇಟಸ್ ಆಫ್ ಎಜುಕೇಶನ್ ರಿಪೋರ್ಟ್- ಎಎಸ್ಇಆರ್) ತಿಳಿಸಿದೆ. ಟ್ಯೂಷನ್ಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆಯೂ ಶೇ 32.5ರಿಂದ ಶೇ 39.2ಗೆ ಏರಿಕೆಯಾಗಿದೆ ಎಂದು ಸಮೀಕ್ಷೆ ವರದಿ ತಿಳಿಸಿದೆ.
ಸೆಪ್ಟೆಂಬರ್-ಅಕ್ಟೋಬರ್ ತಿಂಗಳಿನಲ್ಲಿ ನಡೆಸಲಾದ ಈ ಸಮೀಕ್ಷೆಯ ವರದಿಯನ್ನು ಎಎಸ್ಇಆರ್ ಕೇಂದ್ರದ ನಿರ್ದೇಶಕಿ ವಿಲಿಮಾ ವಾಧ್ವ ಬಿಡುಗಡೆಗೊಳಿಸಿದರು. ಸಮೀಕ್ಷೆಯ ಭಾಗವಾಗಿ 17,814 ಗ್ರಾಮಗಳ 76,606 ಕುಟುಂಬಗಳನ್ನು ಸಂಪರ್ಕಿಸಲಾಗಿತ್ತು. ಸಮೀಕ್ಷೆ ವೇಳೆ ತೆರೆದಿದ್ದ 4,872 ಶಾಲೆಗಳು ಹಾಗೂ ಮುಚ್ಚಿದ್ದ 2,427 ಶಾಲೆಗಳ ಆಡಳಿತಗಳನ್ನೂ ಸಂಪರ್ಕಿಸಿ ಮಾಹಿತಿ ಸಂಗ್ರಹಿಸಲಾಗಿದೆ.
ಸರಕಾರಿ ಶಾಲೆಗಳಿಗೆ ದಾಖಲಾತಿ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ 2020ರ ತನಕ ಸರಿಸುಮಾರು ಹೆಚ್ಚಿನ ಬದಲಾವಣೆಯಿಲ್ಲದೇ ಇದ್ದರೂ ಕಳೆದ ವರ್ಷದ ಸೆಪ್ಟೆಂಬರಿನಿಂದ ಶೇ. 5ರಷ್ಟು ಏರಿಕೆಯಾಗಿದೆ.
ಈ ನಡುವೆ ಖಾಸಗಿ ಶಾಲೆಗಳಿಗೆ ದಾಖಲಾತಿ ಇತ್ತೀಚಿಗಿನ ವರ್ಷಗಳಲ್ಲಿಯೇ ಮೊದಲ ಬಾರಿ ಕಡಿಮೆಯಾಗಿದ್ದು 2020ರಲ್ಲಿ ಈ ಪ್ರಮಾಣ ಶೇ 28.8 ಆಗಿದ್ದರೆ ಈ ವರ್ಷ ಶೇ 24.4 ಆಗಿದೆ.
ಸಮೀಕ್ಷೆಯ ಪ್ರಕಾರ ಉತ್ತರ ಪ್ರದೇಶದಲ್ಲಿ ಸರಕಾರಿ ಶಾಲೆಗಳಿಗೆ ದಾಖಲಾತಿ ಪ್ರಮಾಣದಲ್ಲಿ ಶೇ 13ರಷ್ಟು ಏರಿಕೆ ಆಗಿದ್ದರೆ, ಕೇರಳದಲ್ಲಿ ಶೇ 12 ರಷ್ಟು ಏರಿಕೆಯಾಗಿದೆ. ತೆಲಂಗಾಣ ಹೊರತುಪಡಿಸಿ ಇತರ ದಕ್ಷಿಣ ರಾಜ್ಯಗಳಲ್ಲಿ ಸರಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಶೇ 8ರಷ್ಟು ಏರಿಕೆಯಾಗಿದೆ.
ಕೋವಿಡ್ ಸಾಂಕ್ರಾಮಿಕದ ಸಂದರ್ಭ ಆನ್ಲೈನ್ ತರಗತಿಗಳು ನಡೆಯುತ್ತಿದ್ದ ಕಾರಣ ಗ್ರಾಮೀಣ ಭಾರತದಲ್ಲಿ 2018ರಲ್ಲಿ ಶೇ. 36.5ರಷ್ಟು ಮಂದಿಯ ಬಳಿ ಸ್ಮಾರ್ಟ್ ಫೋನ್ ಇದ್ದರೆ ಈ ಪ್ರಮಾಣ 2020ರಲ್ಲಿ 61.8 ಹಾಗೂ 2021ರಲ್ಲಿ 67.6% ಆಗಿದೆ.
ಆದರೆ ಮನೆಯಲ್ಲಿ ಸ್ಮಾರ್ಟ್ ಫೋನ್ ಇದ್ದರೂ ಶಿಕ್ಷಣಕ್ಕಾಗಿ ಅದರ ಬಳಕೆಗೆ ತಮಗೆ ಅವಕಾಶವಿರಲಿಲ್ಲ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ 26.1ರಷ್ಟು ವಿದ್ಯಾರ್ಥಿಗಳು ಹೇಳಿದ್ದಾರೆ.