ಗ್ರೀಸ್: ಸಿರಿಯಾದ ಈಜುಪಟು ಸಹಿತ 24 ಮಾನವಹಕ್ಕು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು
ಅಥೆನ್ಸ್, ನ.17: ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ ನಿರಾಶ್ರಿತರನ್ನು ರಕ್ಷಿಸುವ ಮೂಲಕ ಜನಮನ್ನಣೆ ಗಳಿಸಿರುವ ಸಿರಿಯಾದ ಈಜುಪಟು ಸಾರಾ ಮರ್ಡಿನಿ ಸಹಿತ ಹಲವು ಮಾನವ ಹಕ್ಕು ಕಾರ್ಯಕರ್ತರ ವಿರುದ್ಧ ಗ್ರೀಸ್ ದೇಶದಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಇವರ ಮೇಲಿನ ಆರೋಪ ಸಾಬೀತಾದರೆ ದಶಕಗಳ ಕಾಲ ಜೈಲುಶಿಕ್ಷೆಗೆ ಗುರಿಯಾಗಬಹುದು ಎಂದು ವರದಿಯಾಗಿದೆ.
ಯುರೋಪ್ ಕಡಲತೀರಕ್ಕೆ ಆಗಮಿಸುವ ಅಸಹಾಯಕ ಜನರಿಗೆ ನೆರವಾಗುವ ‘ಎಮರ್ಜೆನ್ಸಿ ರೆಸ್ಪಾನ್ಸ್ ಸೆಂಟರ್ ಇಂಟರ್‌ನ್ಯಾಷನಲ್(ಇಆರ್‌ಸಿಐ)ಯ 24 ಕಾರ್ಯಕರ್ತರ ವಿರುದ್ಧದ ಪ್ರಕರಣದ ವಿಚಾರಣೆ ಗುರುವಾರ(ನ.18ರಿಂದ) ಆರಂಭವಾಗಲಿದೆ. ಈ ತಂಡ 2016ರಿಂದ 2018ವರೆಗೆ ಗ್ರೀಕ್ ದ್ವೀಪದಲ್ಲಿ ಅಸಹಾಯಕರ ಶೋಧ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿತ್ತು. ಇವರ ವಿರುದ್ಧ ಕಳ್ಳಸಾಗಾಣಿಕೆ, ರೇಡಿಯೊ ತರಂಗಾಂತರದ ಅಕ್ರಮ ಬಳಕೆ ಮಾಡಿ ಬೇಹುಗಾರಿಕೆ , ಹಣ ಅಕ್ರಮ ವರ್ಗಾವಣೆ ಹಾಗೂ ವಂಚನೆ ಆರೋಪ ದಾಖಲಿಸಲಾಗಿದೆ.
ಬೇಹುಗಾರಿಕೆ ಅಪರಾಧಕ್ಕೆ 8 ವರ್ಷ, ಕಳ್ಳಸಾಗಾಣಿಕೆ ಮತ್ತು ಹಣ ಅಕ್ರಮ ಸಾಗಾಣಿಕೆ ಅಪರಾಧಕ್ಕೆ 25 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಮರ್ಡಿನಿ ಹಾಗೂ ಅವರ ಸಹವರ್ತಿ ಸೀನ್ ಬಿಂಡರ್‌ರನ್ನು 3 ವರ್ಷದ ಹಿಂದೆ ಬಂಧಿಸಲಾಗಿತ್ತು. ಜೈಲಿನಲ್ಲಿ 100ಕ್ಕೂ ಹೆಚ್ಚು ದಿನ ಕಳೆದ ಮೇಲೆ 2018ರ ಡಿಸೆಂಬರ್‌ನಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.
ಇದು ನ್ಯಾಯಸಮ್ಮತವಲ್ಲದ, ಆಧಾರರಹಿತ ಆರೋಪವಾಗಿದೆ ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್ ಖಂಡಿಸಿದೆ.







