ಶುಕ್ರವಾರ ಪ್ರಧಾನಿಯಿಂದ ಭಾರತ ನಿರ್ಮಿತ ಹೆಲಿಕಾಪ್ಟರ್ಗಳು, ಡ್ರೋನ್ಗಳು ಸಶಸ್ತ್ರ ಪಡೆಗಳಿಗೆ ಹಸ್ತಾಂತರ

photo:ANI
ಹೊಸದಿಲ್ಲಿ,ನ.17: ಪ್ರಧಾನಿ ನರೇಂದ್ರ ಮೋದಿಯವರು ಮೇಡ್-ಇನ್-ಇಂಡಿಯಾ ಯುದ್ಧ ಹೆಲಿಕಾಪ್ಟರ್ಗಳು, ಡ್ರೋನ್ಗಳು ಮತ್ತು ವಿದ್ಯುನ್ಮಾನ ಯುದ್ಧಗಳ ವಿರುದ್ಧ ರಕ್ಷಣೆಗಾಗಿ ಅತ್ಯಾಧುನಿಕ ಇಲೆಕ್ಟ್ರಾನಿಕ್ ವಾರ್ಫೇರ್ ವ್ಯವಸ್ಥೆ (ಎಇಡಬ್ಲುಎಸ್)ಗಳನ್ನು ಉತ್ತರ ಪ್ರದೇಶದ ಝಾನ್ಸಿಯಲ್ಲಿ ಆಯೋಜಿಸಲಾಗಿರುವ ರಾಷ್ಟ್ರ ರಕ್ಷಾ ಸಮರ್ಪಣ ಪರ್ವದಲ್ಲಿ ಸಶಸ್ತ್ರ ಪಡೆಗಳ ಮುಖ್ಯಸ್ಥರಿಗೆ ಶುಕ್ರವಾರ ಹಸ್ತಾಂತರಿಸಲಿದ್ದಾರೆ.
ಬುಧವಾರ ಆರಂಭಗೊಂಡಿರುವ ಮೂರು ದಿನಗಳ ರಾಷ್ಟ್ರ ರಕ್ಷಾ ಸಮರ್ಪಣ ಪರ್ವವು ಸ್ವಾತಂತ್ರದ 75 ವರ್ಷಗಳ ದ್ಯೋತಕವಾಗಿ ಕೇಂದ್ರದ ಆಝಾದಿ ಕಾ ಅಮೃತ ಮಹೋತ್ಸವದ ಭಾಗವಾಗಿದೆ.
ಪ್ರಧಾನಿಯವರು ಎಚ್ಎಎಲ್ ನಿರ್ಮಿತ ಲಘು ಯುದ್ಧ ಹೆಲಿಕಾಪ್ಟರ್ಗಳನ್ನು ವಾಯುಪಡೆಯ ಮುಖ್ಯಸ್ಥರಿಗೆ, ಸ್ಟಾರ್ಟ್ಪ್ಗಳು ನಿರ್ಮಿಸಿರುವ ಡ್ರೋನ್ಗಳು ಮತ್ತು ಮಾನವ ರಹಿತ ವೈಮಾನಿಕ ವಾಹನ(ಯುಎವಿ)ಗಳನ್ನು ಸೇನಾ ಮುಖ್ಯಸ್ಥರಿಗೆ ಮತ್ತು ಡಿಆರ್ಡಿಒ ಹಡಗುಗಳಿಗಾಗಿ ತಯಾರಿಸಿರುವ ಎಇಡಬ್ಲುಎಸ್ಗಳನ್ನು ನೌಕಾಪಡೆಯ ಮುಖ್ಯಸ್ಥರಿಗೆ ಹಸ್ತಾಂತರಿಸಲಿದ್ದಾರೆ ಎಂದು ಸರಕಾರವು ಹೇಳಿಕೆಯಲ್ಲಿ ತಿಳಿಸಿದೆ. ಇದು ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಒತ್ತು ನೀಡುವ ಉದ್ದೇಶವನ್ನು ಹೊಂದಿದೆ ಎಂದೂ ಅದು ಹೇಳಿದೆ.
ಟ್ಯಾಂಕ್ ನಿರೋಧಕ ನಿರ್ದೇಶಿತ ಕ್ಷಿಪಣಿಗಳ ಪ್ರೊಪಲ್ಶನ್ ಸಿಸ್ಟಮ್ಗಳ ತಯಾರಿಕೆಗಾಗಿ ಉ.ಪ್ರ.ರಕ್ಷಣಾ ಕೈಗಾರಿಕೆ ಕಾರಿಡಾರ್ನ ಭಾಗವಾಗಿ ಝಾನ್ಸಿಯಲ್ಲಿ 400 ಕೋ.ರೂ.ಗಳ ಯೋಜನೆಗೆ ಶಿಲಾನ್ಯಾಸವನ್ನು ನೆರವೇರಿಸಲಿರುವ ಮೋದಿ,ಎನ್ಸಿಸಿಯ ಹಳೆಯ ವಿದ್ಯಾರ್ಥಿಗಳ ಸಂಘವನ್ನು ಉದ್ಘಾಟಿಸಲಿದ್ದಾರೆ ಮತ್ತು ಮಾಜಿ ಕೆಡೆಟ್ ಆಗಿ ಸಂಘದ ಮೊದಲ ಸದಸ್ಯರಾಗಲಿದ್ದಾರೆ. ಎನ್ಸಿಸಿಯ ಮೂರು ವಿಭಾಗಗಳಿಗೆ ತರಬೇತಿ ಸೌಲಭ್ಯಗಳನ್ನು ಹೆಚ್ಚಿಸಲು ಸಿಮ್ಯುಲೇಷನ್ ಟ್ರೇನಿಂಗ್ನ ರಾಷ್ಟ್ರೀಯ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಲಿದ್ದಾರೆ.
ರಾಷ್ಟ್ರೀಯ ಯುದ್ಧ ಸ್ಮಾರಕಕ್ಕಾಗಿ ಇಲೆಕ್ಟ್ರಾನಿಕ್ ಕಿಯೋಸ್ಕ್ಗಳನ್ನೂ ಪ್ರಧಾನಿ ದೇಶಕ್ಕರ್ಪಿಸಲಿದ್ದಾರೆ ಎಂದು ಹೇಳಿಕೆಯು ತಿಳಿಸಿದೆ.







