ಕಾಫಿನಾಡಿನಲ್ಲಿ ನಿಲ್ಲದ ವರುಣನ ಅಬ್ಬರ: ಕೃಷಿಕರ ಪರದಾಟ

ಚಿಕ್ಕಮಗಳೂರು, ನ.17: ಕಾಫಿನಾಡು ಸದ್ಯ ಮಳೆನಾಡಾಗಿ ಪರಿವರ್ತನೆಗೊಂಡಿದ್ದು, ಪ್ರತಿದಿನ ಸುರಿಯುತ್ತಿರುವ ಧಾರಾಕಾರ ಮಳೆ ಜಿಲ್ಲಾದ್ಯಂತ ಜನಜೀವನವನ್ನು ಅಸ್ತವ್ಯಸ್ತ ಗೊಳಿಸಿರುವುದು ಒಂದೆಡೆಯಾದರೇ, ಮತ್ತೊಂದೆಡೆ ಜಿಲ್ಲೆಯ ಕಾಫಿ, ಅಡಿಕೆ ಬೆಳೆಗಾರರು ಹಾಗೂ ಬಯಲು ಭಾಗದ ರೈತರನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ.
ಹವಾಮಾನ ವೈಫರೀತ್ಯದ ಪರಿಣಾಮ ಕಳೆದ ಕೆಲ ದಿನಗಳಿಂದ ಜಿಲ್ಲಾದ್ಯಂತ ಸುರಿಯುತ್ತಿರುವ ಅಕಾಲಿಕ ಮಳೆ ಜಿಲ್ಲಾದ್ಯಂತ ರೈತರ ನಿದ್ದೆಗಡೆಸಿದೆ. ಪ್ರತಿದಿನ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿ ಚಟುವಟಿಕೆಗಳಿಗೆ ಭಾರೀ ಹಿನ್ನೆಡೆಯಾಗಿದೆ. ಸದ್ಯ ಜಿಲ್ಲೆಯಾದ್ಯಂತ ಕಾಫಿ, ಅಡಿಕೆ ಕಟಾವು, ಸಂಸ್ಕರಣೆ ಕೆಲಸ ನಡೆಯುತ್ತಿದ್ದು, ಪ್ರತಿದಿನ ಸಂಜೆ ವೇಳೆ ಸುರಿಯುತ್ತಿರುವ ಧಾರಾಕಾರ ಮಳೆ, ಮೋಡಕವಿದ ವಾತಾವರಣದಿಂದಾಗಿ ಕಾಫಿ, ಅಡಿಕೆ ಬೆಳೆಗಾರ ಕೃಷಿ ಚಟುವಟಿಕೆಗಳಿಗೆ ಬ್ರೇಕ್ ಹಾಕುತ್ತಿದೆ.
ಜಿಲ್ಲೆಯ ಮಲೆನಾಡು ಭಾಗದ ಮೂಡಿಗೆರೆ, ಚಿಕ್ಕಮಗಳೂರು, ಕೊಪ್ಪ, ಶೃಂಗೇರಿ ತಾಲೂಕು ಹಾಗೂ ತರೀಕೆರೆ, ಕಡೂರು ತಾಲೂಕುಗಳ ಅಲ್ಲಲ್ಲಿ ಸದ್ಯ ಅಡಿಕೆ ಕಟಾವು ನಡೆಯುತ್ತಿದೆ. ಕಟಾವು ಮಾಡಿದ ಅಡಿಕೆ ಬೆಳೆಯನ್ನು ಸಂಸ್ಕರಣೆ ಮಾಡಲು ಮಳೆ ಅಡ್ಡಿಯಾಗಿದೆ. ಕಣಗಳಲ್ಲಿ ಕಟಾವು ಮಾಡಿ ಹಾಕಲಾದ ಅಡಿಕೆ ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದು, ಮಳೆ ಹಾಗೂ ಮೋಡಕವಿದ ವಾತಾವರಣದಿಂದಾಗಿ ಬೇಯಿಸಿದ ಅಡಿಕೆಯನ್ನು ಒಣಗಿಸಲು ಸಾಧ್ಯವಾಗದೇ ಬೆಳೆಗಾರರು ತಲೆಮೇಲೆ ಕೈಹೊತ್ತು ಕೂರುವಂತಾಗಿದೆ. ಕೆಲ ಬೆಳೆಗಾರರು ಬೇಯಿಸಿದ ಅಡಿಕೆಯನ್ನು ಸೌದೆ ಒಲೆಯ ಬೆಂಕಿಯಲ್ಲಿ ಕಾಯಿಸಲು ಮುಂದಾಗಿದ್ದು, ಹೀಗೆ ಅಡಿಕೆ ಒಣಗಿಸಲು ಬೆಳೆಗಾರರು ಪರದಾಡುತ್ತಿರುವ ದೃಶ್ಯಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ದೃಶ್ಯಗಳು ಜಿಲ್ಲೆಯಲ್ಲಿ ಮಳೆ ತಂದೊಡ್ಡಿರುವ ದಾರುಣ ಸ್ಥಿತಿಗೆ ಕನ್ನಡಿ ಹಿಡಿಯುತ್ತಿವೆ.
ಇನ್ನು ಜಿಲ್ಲೆಯ ಕಾಫಿ ಬೆಳೆಗಾರರ ಪಾಡಂತೂ ದೇವರಿಗೆ ಪ್ರೀತಿ ಎಂಬಂತಾಗಿದೆ. ಕಟಾವಿಗೆ ಬಂದಿರುವ ಅರೇಬಿಕ ಕಾಫಿಯನ್ನು ಮಳೆಯಿಂದಾಗಿ ಕಟಾವು ಮಾಡಲು ಸಾಧ್ಯವಾಗದ ಪರಿಣಾಮ ಕಾಫಿ ಹಣ್ಣು ಮಣ್ಣು ಪಾಲಾಗುತ್ತಿದೆ. ಇನ್ನು ಕಟಾವು ಮಾಡಿ ಕಣದಲ್ಲಿ ಒಣ ಹಾಕಿದ ಕಾಫಿ ಬೀಜ ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿವೆ. ಮಲೆನಾಡು ಭಾಗದ ಕಾಫಿ ಬೆಳೆಗಾರರೊಬ್ಬರು ಪಲ್ಪರ್ ಮಾಡಿದ ಅರೇಬಿಕಾ ಕಾಫಿ ಬೀಜವನ್ನು ತಮ್ಮ ಮನೆಯೊಳಗಿನ ಎಲ್ಲ ಕೊಠಡಿಗಳಲ್ಲಿ ಹರಡಿದ್ದು, ಮನಮಿಡಿಯುವ ದೃಶ್ಯದ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್ನು ಜಿಲ್ಲೆಯ ಮಲೆನಾಡು ಬಾಗದಲ್ಲಿ ಭತ್ತದ ಕೃಷಿಕರ ಪಾಡು ಇದೇ ಆಗಿದ್ದು, ಭತ್ತದ ಗದ್ದೆಗಳಲ್ಲಿ ಹಸನಾಗಿ ಬೆಳೆದಿರುವ ಭತ್ತದ ಫೈರುಗಳು ಧಾರಾಕಾರ ಮಳೆಯಿಂದಾಗಿ ನೆಲಕ್ಕುರುಳಿ ತೆನೆ ಸಂಪೂರ್ಣವಾಗಿ ಉದುರುತ್ತಿವೆ. ಪರಿಣಾಮ ಭತ್ತದ ಕೃಷಿಕರು ಮಳೆರಾಯನ ಆರ್ಭಟಕ್ಕೆ ಹಿಡಿ ಶಾಪ ಹಾಕುತ್ತಾ ತಲೆ ಮೇಲೆ ಕೈಹೊತ್ತು ಕೂರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಬಯಲು ಭಾಗದ ರೈತರಿಗೂ ಅಕಾಲಿಕ ಮಳೆ ಇನ್ನಿಲ್ಲದ ಕಾಟ ನೀಡಿದ್ದು, ಬಯಲು ಭಾಗದಲ್ಲಿ ಬೆಳೆದಿರುವ ರಾಗಿ, ಜೋಳ, ಆಲೂಗಡ್ಡೆ, ಟೊಮಾಟೊದಂತಹ ಬೆಳೆಗಳು ಮಳೆ ನೀರಿನಲ್ಲಿ ಕೊಳೆತು ನಾರುತ್ತಿವೆ.
ಒಟ್ಟಾರೆ ಅಕಾಲಿಕ ಮಳೆ ಕಾಫಿನಾಡಿನಾದ್ಯಂತ ಕೃಷಿಕರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದು, ಕಳೆದ ಕೆಲ ವರ್ಷಗಳಿಂದ ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿಯಿಂದಾಗಿ ಮಲೆನಾಡಿನ ಕೃಷಿಕರ ಬದುಕು ಹೈರಾಣಾಗಿದ್ದು, ಸದ್ಯ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಮಲೆನಾಡಿನ ಕೃಷಿಕರ ಬದುಕು ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ.







