ಲಸಿಕೆಯ ಎರಡೂ ಡೋಸ್ ಪಡೆದುಕೊಂಡ ವ್ಯಕ್ತಿ ಕೋವಿಡ್‌ಗೆ ಬಲಿ

ಇಂದೋರ್, ನ. 17: ಕೋವಿಡ್ ಲಸಿಕೆಯ ಎರಡೂ ಡೋಸ್ ತೆಗೆದುಕೊಂಡಿದ್ದ 69 ವರ್ಷದ ವ್ಯಕ್ತಿಯೋರ್ವರು ಕೊರೋನ ಸೋಂಕಿನಿಂದ ಮೃತಪಟ್ಟ ಘಟನೆ ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ನಡೆದಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ನಗರದ ಮನೋರಮಾ ರಾಜೆ ಟಿ.ಬಿ. ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಈ ವ್ಯಕ್ತಿ ರವಿವಾರ ರಾತ್ರಿ ಮೃತಪಟ್ಟಿದ್ದಾರೆ ಎಂದು ಇಂದೋರ್ ಜಿಲ್ಲಾ ನೋಡೆಲ್ ಅಧಿಕಾರಿ ಅಮಿತ್ ಮಲಾಕರ್ ಹೇಳಿದ್ದಾರೆ. ನಾಲ್ಕೂವರೆ ತಿಂಗಳಲ್ಲಿ ಇಂದೋರ್‌ನಲ್ಲಿ ಕೋವಿಡ್ ಸೋಂಕಿನಿಂದ ಸಂಭವಿಸಿರುವ ಮೊದಲ ಸಾವು ಇದಾಗಿದೆ ಎಂದು ಅವರು ತಿಳಿಸಿದ್ದಾರೆ. ಕೋವಿಡ್ ಸೋಂಕಿಗೆ ಒಳಗಾದ ಬಳಿಕ ಗಂಭೀರ ಸ್ಥಿತಿಯಲ್ಲಿದ್ದ ಈ ವ್ಯಕ್ತಿಯನ್ನು ನವೆಂಬರ್ 9ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ದೀರ್ಘಾವಧಿಯ ಸಕ್ಕರೆ ಕಾಯಿಲೆಯಿಂದ ಕೂಡ ಬಳಲುತ್ತಿದ್ದರು ಎಂದು ಅವರು ಹೇಳಿದ್ದಾರೆ.
ಈ ವ್ಯಕ್ತಿ ಕೋವಿಡ್ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದುಕೊಂಡಿದ್ದರು. ಆದರೂ ಅವರ ಜೀವ ಉಳಿಸಲು ಸಾಧ್ಯವಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಇದಕ್ಕಿಂತ ಮೊದಲು ಇಂದೋರ್‌ನಲ್ಲಿ ಕೋವಿಡ್ ಸಾವು ಜೂನ್ 29ರಂದು ವರದಿಯಾಗಿತ್ತು ಎಂದು ಮಲಾಕರ್ ಅವರು ತಿಳಿಸಿದ್ದಾರೆ.