ಹಂಸಲೇಖ ವಿರುದ್ಧ ಅಖಿಲ ಭಾರತ ಬ್ರಾಹ್ಮಣ ಸಮಾಜ ದೂರು; ಬೃಂದಾವನಕ್ಕೆ ಬಂದು ಕ್ಷಮೆಯಾಚಿಸುವಂತೆ ಒತ್ತಾಯ

ಬೆಂಗಳೂರು, ನ.17: ದಲಿತರ ಕೇರಿಗಳಿಗೆ ಪೇಜಾವರ ಶ್ರೀಗಳ ಭೇಟಿ ಕುರಿತು ಹೇಳಿಕೆ ಸಂಬಂಧ ನಾದಬ್ರಹ್ಮ ಸಂಗೀತ ನಿರ್ದೇಶಕ ಹಂಸಲೇಖ ಅವರು ಶ್ರೀಗಳ ಬೃಂದಾವನದಲ್ಲಿ ಎಲ್ಲರ ಸಮ್ಮುಖದಲ್ಲಿ ಕ್ಷಮೆಯಾಚಿಸಬೇಕು ಎಂದು ಅಖಿಲ ಭಾರತ ಬ್ರಾಹ್ಮಣ ಸಮಾಜ ಆಗ್ರಹಿಸಿದೆ.
ಬುಧವಾರ ನಗರದ ಪೊಲೀಸ್ ಆಯುಕ್ತರ ಕಚೇರಿಗೆ ದೂರು ಸಲ್ಲಿಸಿದ ಬ್ರಾಹ್ಮಣ ಸಂಘಟನೆಗಳ ಮುಖಂಡರು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ತಪ್ಪಿತಸ್ಥ ಹಂಸಲೇಖ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬ್ರಾಹ್ಮಣ ಸಮಾಜದ ಉಪಾಧ್ಯಕ್ಷ ಕೃಷ್ಣ, ಉನ್ನತ ಸ್ಥಾನದಲ್ಲಿದ್ದ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಶ್ರೀಗಳ ಬಗ್ಗೆ ತೇಜೋವಧೆ ಮಾಡಿರುವುದು ಸರಿಯಲ್ಲ. ಅವರು ಇಂತಹ ಹೇಳಿಕೆ ನೀಡುತ್ತಾರೆ ಎಂದು ಭಾವಿಸಿರಲಿಲ್ಲ ಎಂದರು.
ಹಂಸಲೇಖ ಬ್ರಾಹ್ಮಣ ಸಮುದಾಯಕ್ಕೆ ತೀರಾ ನೋವು ಮಾಡಿದ್ದಾರೆ. ಈ ನಿಟ್ಟಿನಲ್ಲಿ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೂರು ನೀಡಲಾಗಿದೆ. ಅಲ್ಲದೆ, ಶ್ರೀಗಳ ಬೃಂದಾವನದಲ್ಲಿ ಎಲ್ಲರ ಸಮ್ಮುಖದಲ್ಲಿ ಕ್ಷಮೆ ಕೇಳದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡರೀತಿಯಾಗಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.





