ಮೇಧಾಶಕ್ತಿಯ ಸಮರ್ಥ ಬಳಕೆಗೆ ರಾಜ್ಯಕ್ಕೆ ಬನ್ನಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಹ್ವಾನ

ಬೆಂಗಳೂರು, ನ.17: ಮನುಷ್ಯನ ಮೇಧಾಶಕ್ತಿಯ ಸಮರ್ಥ ಬಳಕೆಗೆ ಪೂರಕ ವಾತಾವರಣ ಬೆಂಗಳೂರಿನಲ್ಲಿ, ಕರ್ನಾಟಕ ರಾಜ್ಯದಲ್ಲಿದೆ. ಆದುದರಿಂದ, ರಾಜ್ಯದಲ್ಲಿ ನಾವೀನ್ಯತೆಯನ್ನು ಅನ್ವೇಷಿಸಿ, ಸಾಧನೆಯ ಉತ್ತುಂಗಕ್ಕೇರುವಂತೆ ತಂತ್ರಜ್ಞಾನ ಕ್ಷೇತ್ರದ ಭಾಗೀದಾರರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಕ್ತವಾಗಿ ಕರೆ ನೀಡಿದರು.
ಬುಧವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಜರುಗಿದ ಬೆಂಗಳೂರು ಟೆಕ್ ಸಮ್ಮಿಟ್ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಂತ್ರಜ್ಞಾನದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವ ರಾಜ್ಯ. ರಾಜ್ಯದಲ್ಲಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಅನೇಕ ನಾಯಕರಿದ್ದಾರೆ. ಕಿರಣ್ ಮಜುಂದಾರ್ ಶಾ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸಾಧಕರು ಹಾಗೂ ಪ್ರತಿಭಾವಂತರಿದ್ದಾರೆ ಎಂದರು.
ಅಂತರ್‍ರಾಷ್ಟ್ರೀಯ ಖ್ಯಾತಿಯುಳ್ಳ 300ಕ್ಕೂ ಹೆಚ್ಚು ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಗಳಿವೆ. ಏರೋಸ್ಪೇಸ್, ರಕ್ಷಣಾ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಸೆಮಿ ಕಂಡಕ್ಟರ್, ನವೀಕರಿಸಬಹುದಾದ ಇಂಧನ, ಐ.ಟಿ.ಬಿ.ಟಿ, ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಎಲ್ಲರಿಗೂ ತಂತ್ರಜ್ಞಾನ: ಬೆಂಗಳೂರು ಟೆಕ್ ಸಮ್ಮಿಟ್ ಹಿಂದಿನಿಂದಲೂ ಯಶಸ್ವಿ ಸಮಾವೇಶವಾಗಿದ್ದು, ಈ ಬಾರಿಯ ಸಮಾವೇಶ ಇನ್ನಷ್ಟು ಫಲಪ್ರದವಾಗಬೇಕು. ತಂತ್ರಜ್ಞಾನ ಕ್ಷೇತ್ರದ ಮುನ್ನಡೆಯಲ್ಲಿ, ತಂತ್ರಜ್ಞಾನವನ್ನು ಪ್ರತಿಯೊಬ್ಬರಿಗೂ ಹಾಗೂ ಸಂಪೂರ್ಣ ವ್ಯವಸ್ಥೆಗೆ ತಲುಪಿಸುವಲ್ಲಿ ಈ ಸಮಾವೇಶದಿಂದ ನಿಖರ ಹಾಗೂ ಜವಾಬ್ದಾರಿಯುತ ಕೊಡುಗೆ ದೊರೆಯುವುದು ಎಂಬ ಆಶಯವನ್ನು ಮುಖ್ಯಮಂತ್ರಿ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಎಲ್ಲ ನಾವೀನ್ಯತೆದಾರರು ತಮ್ಮ ಬುದ್ಧಿಶಕ್ತಿಯನ್ನು ಪ್ರದರ್ಶಿಸಲು ಅಗತ್ಯವಿರುವ ವಾತಾವರಣವನ್ನು ಕರ್ನಾಟಕ ಹೊಂದಿದೆ. ವಲಯ ನಿರ್ದಿಷ್ಟ, ಪ್ರಗತಿಪರ ನೀತಿಗಳು, ವಿವಿಧ ಕ್ಷೇತ್ರಗಳ ಅಭ್ಯುದಯಕ್ಕೆ ದಾರ್ಶನಿಕ ತಂಡಗಳು, ವಿವಿಧ ಕ್ಷೇತ್ರಗಳ ನಾಯಕರ ಬೆಂಬಲ ಕರ್ನಾಟಕದಲ್ಲಿದೆ. ಇದರಿಂದಾಗಿ ಕರ್ನಾಟಕವು ಅತ್ಯಂತ ಶ್ರೀಮಂತ, ಉನ್ನತ ಚಿಂತನೆಯ ನಾಯಕತ್ವ, ಪ್ರತಿಭಾವಂತ ಮತ್ತು ಕುಶಲ ಮಾನವ ಸಂಪನ್ಮೂಲವನ್ನು ಹೊಂದಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಯಶಸ್ಸು ಸಾಧನೆಯ ಭಾಗವಾಗಿದ್ದು, ದೇಶ ಹಾಗೂ ವಿಶ್ವದ ಏಳಿಗೆಗೆ ಹಾಗೂ ಅಂತಿಮವಾಗಿ ಮನುಕುಲದ ಒಳಿತಿಗೆ ಕಾರಣವಾಗಬಲ್ಲದು. ಎಲ್ಲ ದೇಶಗಳ ಪ್ರತಿನಿಧಿಗಳು ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಹೂಡಿಕೆ ಮಾಡಿ, ಯಶಸ್ಸು ಗಳಿಸಿ ಸಾಧನೆ ಮಾಡಬೇಕು ಎಂದು ಮುಖ್ಯಮಂತ್ರಿ ಕರೆ ನೀಡಿದರು.
ಹೊಸ ಕರ್ನಾಟಕದಿಂದ ಹೊಸ ಭಾರತವನ್ನು ಕಟ್ಟಬಹುದು. ಪ್ರಧಾನಿ ನೀಡಿರುವ ‘ಆತ್ಮನಿರ್ಭರ ಭಾರತ’ ನಿರ್ಮಾಣದ ಕನಸು ನನಸಾಗಬೇಕು. `ಮೇಕ್ ಇನ್ ಕರ್ನಾಟಕ’ದ ಮೂಲಕ ನಾವು `ಮೇಕ್ ಇನ್ ಇಂಡಿಯಾ’ವನ್ನು ಸಾಕಾರಗೊಳಿಸಬೇಕು. ಯಶಸ್ಸು ಎಂಬುದು ಸಾಧನೆಯ ಒಂದಂಶ ಮಾತ್ರ. ಹೀಗಾಗಿ ಯಶಸ್ಸಿಗಿಂತ ಸಾಧನೆ ಮುಖ್ಯವಾಗಿದ್ದು, ತಂತ್ರಜ್ಞಾನ ವಲಯದಲ್ಲಿರುವವರು ಸಾಧನೆಯನ್ನೇ ಗುರಿಯಾಗಿಸಿಕೊಳ್ಳಬೇಕು. ತಂತ್ರಜ್ಞಾನವು ಕೊನೆಗೆ ಜನರ ಜೀವನದ ಗುಣಮಟ್ಟವನ್ನು ಸುಧಾರಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ತಂತ್ರಜ್ಞಾನದ ಕ್ಷೇತ್ರದಲ್ಲಿ ಕರ್ನಾಟಕವೇ ಭವಿಷ್ಯ: ನಾವೀನ್ಯತೆ ಸರಸ್ವತಿಯಂತೆ. ಬೆಂಗಳೂರು ಸರಸ್ವತಿಯ ವಾಹನ ಹಂಸದಂತೆ. ಹಂಸ ಭಾರಿ ಗಾತ್ರ, ತೂಕದ ಪಕ್ಷಿಯಾಗಿದ್ದರೂ, ಅತಿ ಎತ್ತರಕ್ಕೆ ಏರಬಲ್ಲ ಪಕ್ಷಿಯಾಗಿದೆ. ಅಂತೆಯೇ ಬೆಂಗಳೂರು ನಾವಿನ್ಯತೆಯನ್ನು ಅತಿ ಎತ್ತರಕ್ಕೆ ಕೊಂಡೊಯ್ಯಬಲ್ಲದು ಎಂದು ಮುಖ್ಯಮಂತ್ರಿ ಬಣ್ಣಿಸಿದರು.
ವಿಶ್ವ ನಾಗರಿಕತೆಯ ಪರಿಕಲ್ಪನೆ ಇಂದಿನ ಮಂತ್ರ. ಮನುಷ್ಯನ ವಿಕಾಸಗೊಂಡಂತೆ, ತಂತ್ರಜ್ಞಾನವೂ ವಿಕಾಸಗೊಂಡಿವೆ. ಮಾನವನ ಮೆದುಳಿನ ಶಕ್ತಿಯಿಂದ ಮನುಕುಲದ ಚರಿತ್ರೆಯಲ್ಲಿ ಅದ್ಭುತ ನಾವೀನ್ಯತೆಯನ್ನು ಸಾಧಿಸಲಾಗಿದೆ. ತಾಂತ್ರಿಕತೆಯಲ್ಲಿನ ನಾವೀನ್ಯತೆಗಳನ್ನು ಸಂಸ್ಥೆಗಳಿಗಿಂತಲೂ ಕೆಲವೇ ವ್ಯಕ್ತಿಗಳು ಹೆಚ್ಚಾಗಿ ಮಾಡಿದ್ದಾರೆ. ಆದ್ದರಿಂದ ಮಾನವನ ಬುದ್ಧಿಶಕ್ತಿಯನ್ನು ಗುರುತಿಸಿ, ಗೌರವಿಸಿ, ಸನ್ಮಾನಿಸಬೇಕು ಎಂದು ಅವರು ಹೇಳಿದರು.
ರಾಜ್ಯವು ಐಟಿ-ಬಿಟಿ ತಂತ್ರಜ್ಞಾನ, ಬಾಹ್ಯಾಕಾಶ, ವೈಮಾಂತರಿಕ್ಷ, ಸಂಶೋಧನೆ ಮತ್ತು ಅಭಿವೃದ್ಧಿ, ಸೆಮಿಕಂಡಕ್ಟರ್ ಹೀಗೆ ಎಲ್ಲದರಲ್ಲೂ ಇಡೀ ದೇಶಕ್ಕೇ ಅಗ್ರಸ್ಥಾನದಲ್ಲಿದೆ. ಇದರ ಜತೆಗೆ ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಸೃಷ್ಟಿಯಲ್ಲೂ ಪ್ರಥಮ ಸ್ಥಾನದಲ್ಲಿದೆ. ಹೀಗಾಗಿ ರಾಜ್ಯವು ತಂತ್ರಜ್ಞಾನದ ಭವಿಷ್ಯದ ಬೆಳವಣಿಗೆಗೆ ಪ್ರಶಸ್ತ ತಾಣವಾಗಿದೆ ಎಂದು ವಿವರಿಸಿದರು.







