ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಪ್ರಕರಣ: ಕೋರ್ಟ್ ತೀರ್ಪು ಅನುಷ್ಠಾನಕ್ಕೆ ಮನವಿ
ಬೆಂಗಳೂರು, ನ. 17: `ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಪ್ರಕರಣ ಸಂಬಂಧ ಅವರನ್ನು ಸಚಿವಾಲಯದ ಸೇವೆಗೆ ಮರು ನೇಮಕ ಮಾಡುವ ಮೂಲಕ ನ್ಯಾಯಾಲಯದ ತೀರ್ಪು ಅನುಷ್ಠಾನಗೊಳಿಸಬೇಕು. ಆ ಮೂಲಕ ಪರಿಶಿಷ್ಟ ಜಾತಿಯ ಅಧಿಕಾರಿಗೆ ನ್ಯಾಯ ಒದಗಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟಕ್ಕೆ ಇಳಿಯಬೇಕಾಗುತ್ತದೆ' ಎಂದು ಕರ್ನಾಟಕ ರಾಜ್ಯ ಸರಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಡಿ. ಶಿವಶಂಕರ್, ಪ್ರಧಾನ ಕಾರ್ಯದರ್ಶಿ ಡಾ.ಎಸ್.ವಿಜಯಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಉಭಯ ನಾಯಕರು ಜಂಟಿ ಪತ್ರಿಕಾ ಹೇಳಿಕೆಯನ್ನು ನೀಡಿದ್ದು, `ಕರ್ತವ್ಯ ಲೋಪ ಆಧಾರದ ಮೇಲೆ 2018ರ ಡಿಸೆಂಬರ್ 27ರಂದು ಮೂರ್ತಿ ಅವರನ್ನು ಸಚಿವಾಲಯದ ಸೇವೆಯಿಂದ ಅಮಾನತ್ತು ಮಾಡಲಾಗಿತ್ತು. ಯಾವುದೇ ಅಧಿಕಾರಿ ಮತ್ತು ಸಿಬ್ಬಂದಿ ಅಮಾನತ್ತುಗೊಂಡ ಆರು ತಿಂಗಳಲ್ಲಿ ಸರಕಾರದ ನೀತಿ-ನಿಯಮಗಳಂತೆ ಆದೇಶ ಪಾಲಿಸಬೇಕು. ಹೈಕೋರ್ಟ್ ಮೂರ್ತಿ ಅವರನ್ನು ಸೇವೆಗೆ ಮರು ನೇಮಕಕ್ಕೆ ಆದೇಶಿಸಿದೆ.
ಆದರೆ, ಸರಕಾರ ಈವರೆಗೆ ಕೋರ್ಟ್ ತೀರ್ಪು ಅನುಷ್ಠಾನಗೊಳಿಸಿಲ್ಲ. ಸುಳ್ಳು ಪ್ರಕರಣಗಳಿಂದ ದಲಿತ ಸಮುದಾಯದ ಮೂರ್ತಿ ಅವರ ಕಾರ್ಯದರ್ಶಿ ಹುದ್ದೆಯನ್ನು ಹಿಂಪಡೆದು 3ವರ್ಷಗಳಿಂದ ಜಂಟಿ ಕಾರ್ಯದರ್ಶಿ ಹುದ್ದೆಯಲ್ಲಿರುವ ವಿಶಾಲಾಕ್ಷಿ ಅವರನ್ನು ಹುದ್ದೆಯಲ್ಲಿ ಕೂರಿಸಲಾಗಿದೆ. ನ್ಯಾಯಾಂಗ ನಿಂದನೆ ನೋಟಿಸ್ ನೀಡಿದ್ದರೂ ಮೂರ್ತಿ ಅವರನ್ನು ಸೇವೆಗೆ ಮರು ನೇಮಕ ಮಾಡಿಲ್ಲ. ಇದು ಸರಕಾರದ ದಲಿತ ವಿರೋಧಿ ಧೋರಣೆಗೆ ಸಾಕ್ಷಿ. ಹೀಗಾಗಿ ಕೂಡಲೇ ಮೂರ್ತಿ ಅವರನ್ನು ಮರು ನೇಮಕ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.







