ಸದನದಲ್ಲಿ ಜನಪ್ರತಿನಿಧಿಗಳ ನಡತೆ ಭಾರತೀಯ ಮೌಲ್ಯಗಳನ್ನು ಪ್ರತಿಬಿಂಬಿಸಬೇಕು: ಪ್ರಧಾನಿ ಮೋದಿ

ಹೊಸದಿಲ್ಲಿ, ನ. 17: ದೇಶದ ಶಾಸಕಾಂಗ ಸದನಗಳಲ್ಲಿ ನಡೆಯುವ ಚರ್ಚೆಗಳು ಹಾಗೂ ಜನಪ್ರತಿನಿಧಿಗಳ ನಡತೆ ಭಾರತೀಯ ಮೌಲ್ಯಗಳಿಗೆ ಅನುಗುಣವಾಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಪ್ರತಿಪಾದಿಸಿದ್ದಾರೆ.
ಅಖಿಲ ಭಾರತ ಸದನದ ಅಧ್ಯಕ್ಷರ ಸಮಾವೇಶದ 82ನೇ ಉದ್ಘಾಟನಾ ಅಧಿವೇಶನದಲ್ಲಿ ಪ್ರಧಾನಿ ಅವರು ಮಾತನಾಡಿದರು. ಭಾರತದ ಸ್ವಾತಂತ್ರ 100ನೇ ವರ್ಷಕ್ಕೆ ತಲುಪುತ್ತಿದೆ. ಸಂಸದರು ಹಾಗೂ ಶಾಸಕರು ಮುಂದಿನ 25 ವರ್ಷಗಳು ತಮ್ಮ ಕರ್ತವ್ಯ ನಿರ್ವಹಣೆಯ ಕುರಿತು ಗಮನ ಕೇಂದ್ರೀಕರಿಸಬೇಕು ಎಂದರು. ಶಾಸಕಾಂಗ ಸದನಗಳು ತಮ್ಮ ಕರ್ತವ್ಯದ ಬಗ್ಗೆ ಮಾತನಾಡಬೇಕು. ಅವರಿಂದ ಹೊರ ಹೋಗುವ ಸಂದೇಶವೂ ಅವರ ಕರ್ತವ್ಯಗಳಲ್ಲಿ ಒಂದಾಗಿರಬೇಕು ಎಂದು ಅವರು ಹೇಳಿದರು.
ದೇಶದ ಏಕತೆ ಹಾಗೂ ಸಮಗ್ರತೆ ಕುರಿತ ಯಾವುದೇ ಅಪಶ್ರುತಿ ಬಗ್ಗೆ ಶಾಸಕಾಂಗ ಸದನಗಳು ಎಚ್ಚರವಾಗಿರಬೇಕು ಎಂದು ಪ್ರಧಾನಿ ಅವರು ತಿಳಿಸಿದರು. ಗೌರವಯುತ, ಗಂಭೀರ ಹಾಗೂ ರಾಜಕೀಯ ಮತ್ಸರ ರಹಿತ ಗುಣಮಟ್ಟದ ಚರ್ಚೆಗೆ ಪ್ರತ್ಯೇಕ ಸಮಯ ಮೀಸಲಿಡಬೇಕು ಎಂದು ಪ್ರಧಾನಿ ಅವರು ಹೇಳಿದರು.
Next Story