ಕರ್ತಾರ್ಪುರಕ್ಕೆ ಇಂದು ಪಂಜಾಬ್ ಸಿಎಂ ಜಾಥಾ, ಸಿದ್ದು ಗೈರು

(ANI Photo)
ಅಮೃತಸರ: ಪಾಕಿಸ್ತಾನದ ಕರ್ತಾರ್ಪುರದಲ್ಲಿರುವ ಗುರುದ್ವಾರ ದರ್ಬಾರ್ ಸಾಹಿಬ್ಗೆ ಗುರುವಾರ ಪಂಜಾಬ್ ಮುಖ್ಯಮಂತ್ರಿ ಚರಣ್ ಜೀತ್ ಸಿಂಗ್ ಚನ್ನಿ, ಅವರ ಸಂಪುಟ ಸಹೋದ್ಯೋಗಿಗಳು ಜಾಥಾದಲ್ಲಿ ತೆರಳಿ ದರ್ಶನ ಪಡೆಯಲಿದ್ದಾರೆ. ಕೆಲ ಮಂದಿ ಶಾಸಕರು ಮತ್ತು ಅಧಿಕಾರಿಗಳು ಕೂಡಾ ಚನ್ನಿ ಜತೆ ತೆರಳುವ ನಿರೀಕ್ಷೆ ಇದೆ.
ಆದರೆ ಕರ್ತಾರ್ಪುರಕ್ಕೆ ತೆರಳುವ ಜಾಥಾದಲ್ಲಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜ್ಯೋತ್ ಸಿಂಗ್ ಸಿಧು ಪಾಲ್ಗೊಳ್ಳುವುದಿಲ್ಲ. ಸಿಧು ನವೆಂಬರ್ 18ರ ಬದಲಾಗಿ ನವೆಂಬರ್ 20ರಂದು ಭೇಟಿ ನೀಡುವುದಾಗಿ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ ಎಂದು ಸಿಧು ಅವರ ಮಾಧ್ಯಮ ಸಲಹೆಗಾರ ಸುರೀಂದರ್ ದಲ್ಲಾ ಹೇಳಿಕೆ ನೀಡಿದ್ದಾರೆ. ಸಿಕ್ಖರ ಐತಿಹಾಸಿಕ ಮಂದಿರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಲು ಸಿಧು ತಮ್ಮ ಅರ್ಜಿಯನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಟ್ಟಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಕಸ್ಟಮ್ಸ್ ಅಧಿಕಾರಿಗಳ ಪ್ರಕಾರ ಸಿಕ್ಖ್ ಧರ್ಮದ ಸಂಸ್ಥಾಪಕ ಗುರುನಾನಕ್ ಅವರ ಜಯಂತಿ ಅಂಗವಾಗಿ ಸುಮಾರು 100 ಮಂದಿ ಭೇಟಿ ನೀಡಲಿದ್ದಾರೆ.
ಗುರುದಾಸ್ಪುರ ಜಿಲ್ಲೆಯ ದೇರಾ ಬಾಬಾ ನಾನಕ್ ಮಂದಿರದಿಂದ ಸಿಕ್ಖ್ ಧರ್ಮದ ಸಂಸ್ಥಾಪಕ ಗುರುನಾನಕ್ ದೇವ್ ಅವರ ಸಮಾಧಿ ಸ್ಥಳವಾದ ಪಾಕಿಸ್ತಾನದಲ್ಲಿರುವ ಗುರುದ್ವಾರ ದರ್ಬಾರ್ ಸಾಹಿಬ್ಗೆ ಸಂಪರ್ಕ ಕಲ್ಪಿಸುವ ಕರ್ತಾರ್ಪುರ ಕಾರಿಡಾರ್ ಬುಧವಾರ ಮುಕ್ತಗೊಂಡಿತ್ತು. 28 ಮಂದಿಯ ಜಾಥಾ ಮೊದಲ ದಿನ ವೀಸಾ ಮುಕ್ತ ಕಾರಿಡಾರ್ನಲ್ಲಿ ಪ್ರಯಾಣಿಸಿ ಪ್ರಾರ್ಥನೆ ಸಲ್ಲಿಸಿತ್ತು.







